ಬೆಲೆ ಏರಿಕೆ: ಜನಸಾಮಾನ್ಯರು ಹೈರಾಣ: ಹರ್ಷಾನಂದ ಗುತ್ತೇದಾರ ಆಕ್ರೋಶ
ಕಲಬುರಗಿ:ಜೂ.27:ಕರ್ನಾಟಕ ರಾಜ್ಯ ಸರ್ಕಾರವು ಇಂಧನದ ಮೇಲೆ ತೆರಿಗೆಯನ್ನು ಏರಿಕೆ ಮಾಡಿದೆ ಇದರಿಂದ ಪೆಟ್ರೋಲ್ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿ ದುಬಾರಿಯಾಗಿದೆ ಅಲ್ಲದೇ ಇದರ ಪರಿಣಾಮ ಹಾಲಿನ ಮೇಲೂ ಆಗಿದ್ದು ಈಗ ಹಾಲಿನ ದರವನ್ನು 2 ರೂ. ಏರಿಸಿದ್ದಾರೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಲೆ ಏರಿಕೆ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿಎಂ ಸಿದ್ದರಾಮಯ್ಯ ನುಂಗಣ್ಣನಂತೆ ಎಲ್ಲವನ್ನೂ ನುಂಗುತ್ತಿದ್ದಾರೆ. ಅದರ ಜೊತೆಗೆ ತೈಲ ದರ ಏರಿಕೆ ಮಾಡಿ ಜನರನ್ನು ಲೂಟಿ ಮಾಡುತ್ತಿದ್ದಾರೆ. ಜನರು ದಂಗೆ ಎದ್ದು ಸರ್ಕಾರವನ್ನು ಕಿತ್ತುಹಾಕಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಿಸಿ ಅಂಗನವಾಡಿಗಳನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರ ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ ರಾಜ್ಯದ ಇತರೆಡೆ ಹೊರತುಪಡಿಸಿ ಕೇವಲ ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ ಇದು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.
ಆಳಂದ ಶಾಸಕ ಬಿ ಆರ್ ಪಾಟೀಲ ಅಂಗನವಾಡಿ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಈಗ ಇದರ ಬಗ್ಗೆ ಏನೂ ಹೇಳುತ್ತಾರೆ ಎಂದು ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡು ನಾಲಿಗೆ ಇದೆ. ಬಿಜೆಪಿ ಸರ್ಕಾರ ಪೆಟ್ರೋಲ್ ದರ ಏರಿಸಿದ್ದಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನೆ ಮಾಡಿದ್ದರು. ಈಗ ಮೂರು ರೂಪಾಯಿ ಹೆಚ್ಚು ಮಾಡಿದ ಕಾಂಗ್ರೆಸ್ ನಾಯಕರಿಗೆ ಮಾನ ಮರ್ಯಾದೆ ಇಲ್ಲ. ಈಗ ಸಿದ್ದರಾಮಯ್ಯ ಎಂದರೆ ನುಂಗಣ್ಣ ಎಂದು ವ್ಯಂಗ್ಯವಾಡಿದ್ದಾರೆ. ತೈಲ ಬೆಲೆ ಏರಿಯಾದರೆ ಸಿಮೆಂಟ್, ತರಕಾರಿ ಎಲ್ಲ ಬೆಲೆಯೂ ಏರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಯಾವ ಬೆಲೆಗಳು ಹೆಚ್ಚಲಿದೆ ಎಂದು ತಿಳಿಸಲಿ. ಗ್ಯಾರಂಟಿ ಯೋಜನೆಗಳೆಂದು ಹೇಳಿ ಎಲ್ಲರಿಗೂ ಒಂದು ಲಕ್ಷ, ಎರಡು ಸಾವಿರ ಕೋಡುತ್ತೇವೆ ಎಂದರು. ರಾಹುಲ್ ಗಾಂಧಿ ಇನ್ನೂ ಮುಂದೆ ಹೋಗಿ ಟಕಾಟಕ್ ಎಂದು ಹಾಕುತ್ತೇನೆ ಎಂದಿದ್ದರು. ಆದರೆ ಟಕಾಟಕ್ ಎಂದು ಜೇಬಿಗೆ ಕತ್ತರಿ ಹಾಕಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗೆ 55,000 ಕೋಟಿ ರೂ. ಮೀಸಲಿಟ್ಟಿದೆ ಎಂದು ಹೇಳಲಾಗಿದೆ. ಇವರು ನಮ್ಮದೇ ಹಣವನ್ನು ದರೋಡೆ ಮಾಡಿ ನಮಗೆ ಮರಳಿ ನೀಡುತ್ತಿದ್ದಾರೆ. ಒಂದು ವರ್ಷವಾದರೂ ಅಭಿವೃದ್ಧಿ ಕಾರ್ಯ ನಡೆದಿಲ್ಲ, ಶಿಕ್ಷಕರಿಗೆ ಸಂಬಳ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ದಲಿತರ 187 ಕೋಟಿ ರೂಪಾಯಿ ನುಂಗಿ ಸಚಿವ ಬಿ.ನಾಗೇಂದ್ರ ಔಟ್ ಆಗಿದ್ದಾರೆ. ಇನ್ನು ಎರಡನೇ ವಿಕೆಟ್ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿದೆ. ಸಚಿವ ನಾಗೇಂದ್ರ 20 ಪಸೆರ್ಂಟ್ ಜೇನು ಕಿತ್ತಿದ್ದು ಮಾತ್ರ, ಆದರೆ 80 ಪಸೆರ್ಂಟ್ ಜೇನನ್ನು ಸಿಎಂ ಸಿದ್ದರಾಮಯ್ಯ ಹೊಡೆದಿದ್ದಾರೆ. ಈ ಹಣ ತೆಲಂಗಾಣಕ್ಕೆ ಹೋಗಿ, ಬಳಿಕ ಬಾರ್‍ಗಳಿಗೆ ಹೋಗಿದೆ. ದಲಿತರ ಉದ್ಯಮಗಳಿಗೆ, ಅಂಗಡಿಗಳಿಗೆ, ಅವರ ಮಕ್ಕಳ ಸ್ಕಾಲರ್‍ಶಿಪ್‍ಗೆ ಈ ಹಣ ಕೊಡಬೇಕಿತ್ತು. ಚೆಕ್‍ನಲ್ಲೇ ಹಗಲು ದರೋಡೆ ಮಾಡಿದ್ದಾರೆ. ಇದರಿಂದಾಗಿ ನಿμÁ್ಠವಂತ ಅಧಿಕಾರಿ ಸತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಜನರು ಕಲುಷಿತ ನೀರು ಕುಡಿದು ಸಾಯುತ್ತಿದ್ದರೂ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ. ಸರ್ಕಾರಿ ಆಸ್ಪತ್ರೆಗೆ ಔಷಧಿ ಖರೀದಿಗೆ, ಶಾಲೆಗೆ ಪುಸ್ತಕ ಕೊಡಲು ಹಣವಿಲ್ಲ. ಇದಕ್ಕಾಗಿಯೇ ತೈಲ ಬೆಲೆ ಏರಿಕೆ ಮಾಡಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಸರ್ಕಾರದ ಬಂಡವಾಳ ಬಯಲು ಮಾಡುತ್ತೇವೆ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಹಾಗೂ ಸರ್ಕಾರದ ಬಂಡವಾಳ ಬಯಲು ಮಾಡಲು ಬಿಜೆಪಿ ಇನ್ನಷ್ಟು ಹೋರಾಟ ಮಾಡಲಿದೆ. ಸಿಎಂ ಸಿದ್ದರಾಮಯ್ಯ ರಾಜ್ಯದ ಆರ್ಥಿಕತೆಯನ್ನು ದಿವಾಳಿಯಾಗಿಸಿದ್ದಾರೆ. ಎಲ್ಲರೂ ದಂಗೆ ಎದ್ದು ಈ ಸರ್ಕಾರವನ್ನು ಕಿತ್ತು ಹಾಕಬೇಕಿದೆ ಎಂದು ಕರೆ ನೀಡಿದ್ದಾರೆ.