ನ್ಯಾಯವಾದಿ ವೀರಣ್ಣಗೌಡ ಕೊಲೆ ಆರೋಪಿಗಳ ಜಾಮೀನು ಅರ್ಜಿ ತಿರಸ್ಕಾರ
ಕಲಬುರಗಿ,ಜೂ.27-ನ್ಯಾಯವಾದಿ ವೀರಣ್ಣಗೌಡ ಪೊಲೀಸ್ ಪಾಟೀಲ ಕೊಲೆ ಪ್ರಕರಣದ 1ನೇ ಮತ್ತು 3ನೇ ಆರೋಪಿತರಾದ ಉದನೂರ ಗ್ರಾಮದ ಅವಣ್ಣಪ್ಪ ಮತ್ತು ಮಲ್ಲಿನಾಥ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಇಲ್ಲಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲವು ತಿರಸ್ಕರಿಸಿದೆ.
ಆರೋಪಿತರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ನ್ಯಾಯಾಧೀಶ ಎ.ವಿ.ಶ್ರೀನಾಥ ಅವರು ವಾದ ವಿವಾದಗಳನ್ನು ಆಲಿಸಿದ ನಂತರ ಆರೋಪಿತರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಕೊಲೆ ಮಾಡಿದ ಬಗ್ಗೆ ತನಿಖೆಯಿಂದ ಕಂಡು ಬಂದಿವೆ. ಆರೋಪಿತರಿಗೆ ಜಾಮೀನು ದೊರೆತಲ್ಲಿ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಆರೋಪಿತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದ್ದಾರೆ.
ನ್ಯಾಯವಾದಿ ವೀರಣ್ಣಗೌಡ ಪೊಲೀಸ್ ಪಾಟೀಲ ಅವರು 7.12.2023 ರಂದು ಬೆಳಿಗ್ಗೆ 10.30ರಕ್ಕೆ ಉದನೂರು ತೋಟದ ಮನೆಯಿಂದ ಕೋರ್ಟಿಗೆ ಹೋಗುತ್ತೇನೆಂದು ಮನೆಯಿಂದ ಕೋರ್ಟಿಗೆ ಬೈಕ್ ಮೇಲೆ ಹೋಗುತ್ತಿದ್ದಾಗ ಅವರನ್ನು ಮಾರಕಾಸ್ತ್ರಗಳಿಂದ ಹೊಡೆದು ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.