ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿ ಸಹೋದರಿಯರಿಗೆ 20 ಲಕ್ಷ ರೂ.ವಂಚನೆ
ಕಲಬುರಗಿ,ಜೂ.27-ಕ್ವೆಸ್ಟ್ ಕ್ಯಾಪಿಟಲ್ ಟ್ರೇಡಿಂಗ್‍ನಲ್ಲಿ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟಾಗುತ್ತದೆ ಎಂದು ನಂಬಿಸಿ ಸಹೋದರಿಯರಿಂದ 20 ಲಕ್ಷ ರೂ.ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿರುವ ನಗರದ ರಾಘವೇಂದ್ರ ಕಾಲೋನಿಯ ಪೂರ್ಣಿಮಾ ನಾರಾಯಣರಾವ ಕುಲಕರ್ಣಿ ಮತ್ತು ಅವರ ಸಹೋದರಿ ಪ್ರತಿಮಾ ಅವರಿಗೆ ಹುಬ್ಬಳ್ಳಿ ಮೂಲದ ಹಣಮಂತ ಕೊಳ್ಳೂರ ಎಂಬಾತ ವಂಚನೆ ಮಾಡಿದ್ದಾರೆ.
ಟ್ರೇಡಿಂಗ್ ತರಬೇತಿ ವೇಳೆ ಪರಿಚಯವಾದ ಹಣಮಂತ, ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ, ನಂಬಿಸಿ ಇಬ್ಬರಿಂದ ತಲಾ 10 ಲಕ್ಷದಂತೆ 20 ಲಕ್ಷ ರೂ. ಪಡೆದಿದ್ದರು. ಹೂಡಿಕೆಯ ಹಣ ವಾಪಸ್ ಕೊಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಪೂರ್ಣಿಮಾ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.