ಕರ್ಜಗಿ: ಉದ್ಘಾಟನೆಗೂ ಮುನ್ನವೇ ಹಾಳುಬಿದ್ದ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ !
ಹುಸೇನ್ ಮುಲ್ಲಾ ಕರಜಗಿ
ಕರ್ಜಗಿ,ಜೂ.27-ಸರ್ಕಾರ ಪ್ರತಿ ವರ್ಷ ಶಿಕ್ಷಣ ಇಲಾಖೆಗೆ ಕೋಟ್ಯಾಂತರ ರೂ.ಹಣ ಬಿಡುಗಡೆ ಮಾಡಿ ಶಾಲಾ ಕಟ್ಟಡಗಳು ಸೇರಿದಂತೆ ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರೂ ಸಹ ಗುತ್ತಿಗೆದಾರರಿಂದ ಗುಣಮಟ್ಟದ ಕೆಲಸ ಆಗದಿರುವುದರಿಂದ ಸರ್ಕಾರಕ್ಕೆ ಪ್ರತಿ ವರ್ಷ ಸಾಕಾಷ್ಟು ನಷ್ಟ ಉಂಟಾಗುತ್ತಿದೆ.
ಕಳಪೆ ಕಾಮಗಾರಿಗೆ ಡಿಡಿಪಿಐ ಆಕ್ರೋಶ !
ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಕಳೆದ ಎಪ್ರಿಲ್ 30ರಂದು ಡಿಡಿಪಿಐ ದಿಢೀರ್ ಭೇಟಿ ನೀಡಿ 8 ಕೋಣೆಗಳ ಕಾಮಗಾರಿಯನ್ನು ಪರಿಶೀಲಿಸಿ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಪತ್ರ ಬರೆದು ಕೋಣೆಗಳ ಕಾಮಗಾರಿ ಅಪೂರ್ಣವಾಗಿರುವುದು ಕಂಡುಬಂದಿದೆ. ಕಾಮಗಾರಿ ಪೂರ್ಣಗೊಂಡಿರುವುದಾಗಿ ಪಿ.ಸಿ.ಆರ್ ಸಲ್ಲಿಸಿದ್ದೀರಿ, ಅಪೂರ್ಣ ಕಾಮಗಾರಿಯ ಬಗ್ಗೆ ಪಿ.ಸಿ.ಆರ್ ಸಲ್ಲಿಸಿರುವುದು ಬಹಳ ವಿಷಾದನೀಯ. ಅಲ್ಲದೇ ಶಾಲೆಯ ಮುಖ್ಯ ಗುರುಗಳಿಗೆ ಅಂದಾಜು ಪಟ್ಟಿ ನೀಡದೆ ಇರುವುದು ಸಹ ಕಂಡು ಬಂದಿದೆ. ಹೀಗಾಗಿ ಇದು ಸರಿಪಡಿಸಿ ಎಂದು ಪತ್ರ ಬರೆದಿದ್ದರೂ ಸಹ ಇಲ್ಲಿವರೆಗೂ ಯಾವುದೇ ಕಾಮಗಾರಿ ಪೂರ್ಣಗೊಳಿಸಿಲ್ಲ.
ಬಾಕಿ ಉಳಿದ ಕಾಮಗಾರಿ
ಕಟ್ಟಡಕ್ಕೆ ಬಾಗಿಲುಗಳು, ಕಿಟಕಿಗಳಿಗೆ ಗ್ರಿಲ್ ಗಳು ಅಳವಡಿಸಿರುವುದಿಲ್ಲ, ಮೇಲ್ಛಾವಣಿಯಲ್ಲಿ ಮಳೆ ಬಂದರೆ ನೀರು ನಿಲ್ಲುತ್ತದೆ, ಕಟ್ಟಡಕ್ಕೆ ವಿದ್ಯುತ್ ವ್ಯವಸ್ಥೆ ಅಳವಡಿಸಿಸುವುದಿಲ್ಲ, ಕೋಣೆಗಳಲ್ಲಿ ಫ್ಯಾನ್ ಅಳವಡಿಸಿಲ್ಲ, ನೆಲಹಸು ಅಪೂರ್ಣವಾಗಿದೆ,ಸ್ಟೇರ್ ಕೇಸ್ ಗಳಲ್ಲಿ ಪರಿಸಿ ಹಾಕಿಲ್ಲ.
ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡದ ನಿರ್ಮಾಣದ ಬಗ್ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇದಕ್ಕಿಂತ ಮುಂಚೆ ಮೇಲಾಧಿಕಾರಿಗಳು ಸಹ ಭೇಟಿ ನೀಡಿ ಕಾಮಗಾರಿ ತೆಗೆದುಕೊಂಡಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಹೀಗಾಗಿ ಇನ್ನೊಮ್ಮೆ ನಮ್ಮ ಕಡೆಯಿಂದ ಒಂದು ಪತ್ರ ಬರೆದು, ಸಂಬಂಧಪಟ್ಟ ಅಧಿಕಾರಿಗಳ ಜತೆಗೂ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು.
-ಜ್ಯೋತಿ ಪಾಟೀಲ್ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಅಫಜಲಪುರ.
ಗ್ರಾಮದ ಶಾಲಾ ಮಕ್ಕಳಿಗೆ ಅನುಕೂಲವಾಗಲೆಂದು ನನ್ನ ಅವಧಿಯಲ್ಲಿ ಶಾಸಕರ ಸಹಕಾರದಲ್ಲಿ ಸಾಕಷ್ಟು ಅನುದಾನ ತಂದು ಶಾಲಾ ಕಟ್ಟಡಕ್ಕೆ ನೀಡಿದರೆ.ಗುಣಮಟ್ಟದ ಕಾಮಗಾರಿ ಮಾಡದೆ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿ ಬೇಕಾಬಿಟ್ಟಿ ಕಾಮಗಾರಿ ಮಾಡಿರುವುದು ಖಂಡನೀಯವಾಗಿದೆ.ಇದು ಸರಿಪಡಿಸದಿದ್ದರೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಬೇಕಾಗುತ್ತದೆ.
-ಭೀಮಾಶಂಕರ ಹೊನ್ನಕೇರಿ, ತಾ.ಪಂ.ಮಾಜಿ ಉಪಾಧ್ಯಕ್ಷರು, ಅಫಜಲಪುರ