ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಕನ್ನಡ ಕಡ್ಡಾಯ
ಸೈದಾಪುರ:ಜೂ.27:ಪ್ರತಿಯೊಂದು ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಕನ್ನಡದ ಬರಹವನ್ನು ಕಡ್ಡಾಯವಾಗಿ ಬರೆಯುವಂತೆ ಮಾಲಿಕರಿಗೆ ತಿಳಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕ ಪ್ರಧಾನ ಕಾರ್ಯದರ್ಶಿ ಸುರೇಶ ಬೆಳಗುಂದಿ ಆಗ್ರಹಿಸಿದರು.
ಪಟ್ಟಣದಲ್ಲಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಂಗಡಿ ಮುಂಗಟ್ಟುಗಳ ನಾಮಫಕದಲ್ಲಿ ಕನ್ನಡ ಕಡ್ಡಾಯವಾಗಿರಬೇಕು ಎಂಬ ವಿಷಯದ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುದುಕಣ್ಣ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಕರ್ನಾಟಕದಲ್ಲಿನ ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆಸಿಗಬೇಕು ಹಾಗೂ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡದ ಬರವಣಿಗೆಯನ್ನು ಅಳವಡಿಸಿಕೊಳ್ಳಬೇಕೆಂದು ಕರವೇ ಹೋರಾಟ ನಡೆಸಿದ ಪರಿಣಾಮ ರಾಜ್ಯ ಸರ್ಕಾರವು ಕೂಡ ಆದೇಶ ನೀಡಿತು. ಆದರೆ ಸುತ್ತಮುತ್ತಲಿನ 25ರಿಂದ30 ಹಳ್ಳಿಗಳಿಗೆ, ಗಡಿ ಭಾಗದ ರಾಜ್ಯಗಳಿಗೆ ಪ್ರಮುಖ ವ್ಯಾಪಾರ ಮತ್ತು ಶಿಕ್ಷಣ ಕೇಂದ್ರವಾಗಿ ಬೆಳೆಯುತ್ತಿರುವ ಪಟ್ಟಣದಲ್ಲಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿನ ಅಂಗಡಿ-ಮುಂಗಟ್ಟುಗಳ ನಾಮಫಲಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವ ಬಗ್ಗೆ, ಸರ್ಕಾರ ಹೊರಡಿಸಿದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಆದ್ದರಿಂದ ಮುಂದಿನ 15 ದಿನಗಳಲ್ಲಿ ಸ್ಥಳೀಯ ಸರ್ಕಾರದ ಮೂಲಕ ಪ್ರಚಾರ ಕೈಗೊಂಡು ಕನ್ನಡ ಕಡ್ಡಾಯದ ಸರ್ಕಾರದ ಆದೇಶವನ್ನು ಪಾಲಿಸುವಂತೆ ತಿಳಿಸಬೇಕು. ಒಂದು ವೇಳೆ ಅಳವಡಿಸಿಕೊಳ್ಳದೆ ಇದ್ದರೆ ಅಂತಹ ಅಂಗಡಿಗಳ ಪರವಾನಿಗೆ ರದ್ದುಪಡಿಸಬೇಕು. ಇದು ಹೀಗೆ ಮುಂದುವರೆದರೆ ನಾವೇ ಖುದ್ದಾಗಿ ನಾಮಫಲಕಗಳಿಗೆ ಮಸಿ ಬಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕ ಪ್ರಧಾನ ಕಾರ್ಯದರ್ಶಿ ಸುರೇಶ ಬೆಳಗುಂದಿ, ಬಸವರಾಜ ನಾಯಕ, ಸೈದಾಪುರ ವಲಯಾಧ್ಯಕ್ಷ ಸಾಗರ ಹುಲ್ಲೇರ್, ಮಲ್ಲು ಬಾಡಿಯಾಲ, ತೈಸಿನ್, ಆಂಜನೇಯ ಬಾಗ್ಲಿ, ರಾಘು ಇಂದಿರಾನಗರ ಸೇರಿದಂತೆ ಇತರರಿದ್ದರು.