ಬೆಲೆ ಏರಿಕೆ ಕೊಡುಗೆಯ ಕಾಂಗ್ರೆಸ್ ಸರಕಾರ: ಮಾಜಿ ಶಾಸಕ ಗುತ್ತೇದಾರ ಆಕ್ಷೇಪ
ಆಳಂದ:ಜೂ.27:ರಾಜ್ಯದ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರಕಾರವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಬೆಲೆ ಏರಿಕೆಯ ಕೊಡುಗೆಯನ್ನು ವರ್ಷದುದ್ದಕ್ಕೂ ಜನರಿಗೆ ನೀಡಿದೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜನರ ರಕ್ತ ಹೀರುವುದು; ಬೆಲೆ ಏರಿಕೆಯ ಬರೆ ಎಳೆಯುವುದೇ ಈ ಸರಕಾರದ ಸಾಧನೆ ಎಂದು ಟೀಕಿಸಿದ್ದಾರೆ. ಬೆಲೆ ಏರಿಕೆ ಮತ್ತು ಹಣದುಬ್ಬರದ ಗ್ಯಾರಂಟಿಯನ್ನು ಕಾಂಗ್ರೆಸ್ ಸರಕಾರ ನೀಡುತ್ತಿದೆ ಎಂದು ದೂರಿದ್ದಾರೆ.
ಹೈನುಗಾರರಿಗೆ ಹಾಲಿನ ಸಬ್ಸಿಡಿ ನೀಡಿಲ್ಲ; ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಬೇಕಾದ ಹಣ ನೀಡುತ್ತಿಲ್ಲ. ಬರ ನಿರ್ವಹಣೆಯಲ್ಲಿ ಸರಕಾರ ತನ್ನ ಪಾಲಿನ ಹಣವನ್ನೂ ನೀಡಿಲ್ಲ. ರೈತರ ಮೇಲೆ ಬಿತ್ತನೆ ಬೀಜದ ದರದಿಂದ ಆರಂಭಿಸಿ ವಿದ್ಯುತ್ತಿನ ವರೆಗೆ, ನೀರಿನ ದರವನ್ನೂ ಹೆಚ್ಚಿಸಿಕೊಂಡು ಬರುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅರ್ಧ ಲೀಟರ್ ಹಾಲಿಗೂ 2 ರೂ, ಒಂದು ಲೀಟರ್ ಹಾಲಿಗೂ 2 ರೂ. ದರ ಏರಿಸಿದೆ. ಬಡವರಿಗೆ ದೊಡ್ಡ ಹೊಡೆತ ಕೊಟ್ಟಂತಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಭ್ರಷ್ಟ ಕಾಂಗ್ರೆಸ್ ಸರಕಾರವು ಜನವಿರೋಧಿ; ಇದು ಅಭಿವೃದ್ಧಿ ಶೂನ್ಯ ಸರಕಾರ ಎಂದು ಟೀಕಿಸಿದ್ದಾರೆ.
ಬಿಜೆಪಿ ಈ ಬೆಲೆ ಹೆಚ್ಚಳವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು. ಜನರು ನಿಮಗೆ ಆಶೀರ್ವಾದ ಮಾಡಿದ್ದಾರೆ. ಜನರಿಗೆ ಕಿರುಕುಳ, ಹಿಂಸೆ ಕೊಡುವುದು ಸಲ್ಲ. ತೆರಿಗೆಯ ಬರೆ ಎಳೆಯಬೇಡಿ. ಅಧಿಕಾರವನ್ನು ಪ್ರಾಮಾಣಿಕವಾಗಿ, ಜನಪರ ಆಡಳಿತ ಕೊಡಬೇಕು ಎಂದು ಆಗ್ರಹಿಸಿದರು. ಅದರ ಬದಲು, ವಾಲ್ಮೀಕಿ ನಿಗಮ ಸೇರಿ, ಎಲ್ಲ ಇಲಾಖೆಗಳಲ್ಲಿ ಲೂಟಿ ನಡೆದಿದೆ ಎಂದು ಅವರು ಹೇಳಿದ್ದಾರೆ.