ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ
ಗುಳೇದಗುಡ್ಡ,ಜೂ.27: ಗ್ರಾಮದಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತೋಗುಣಶಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸುಮಾರು 15.80 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಿಸಲಾಗುತ್ತಿದ್ದು, ಇದರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಸಮೀಪದ ತೋಗುಣಶಿ ಗ್ರಾಮದಲ್ಲಿ 2022-23ನೇ ಸಾಲಿನ ತಾಲೂಕು ಪಂಚಾಯಿತಿ ಅನಿರ್ಭಂದಿತ ಅನುದಾನದಡಿಯಲ್ಲಿ 15.80 ಲಕ್ಷರೂ. ವೆಚ್ಚದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಟ್ಟಡದ ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಇಲಾಖೆಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಅಮರೇಶ್ವರ ಮಠದ ಶ್ರೀ ನೀಲಕಂಠ ಸ್ವಾಮಿಗಳ ನೇತೃತ್ವದಲ್ಲಿ ಗ್ರಾಮಸ್ಥರು, ಗ್ರಾಮದಲ್ಲಿ ರಸ್ತೆ ನಿರ್ಮಿಸುವಂತೆ ಹಾಗೂ ಆಲಮಟ್ಟಿಯಿಂದ ಗ್ರಾಮಕ್ಕೆ ಬರುತ್ತಿದ್ದ ಕುಡಿಯುವ ನೀರು ಸರಬರಾಜು ನಿಂತಿದ್ದು ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ, ಮೊದಲಿನಂತೆ ಗ್ರಾಮಕ್ಕೆ ಆಲಮಟ್ಟಿಯ ನೀರು ಸರಬರಾಜು ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
ಕುಡಿಯುವ ನೀರು ಪೂರೈಕೆ ನಿಂತಿರುವ ಬಗ್ಗೆ ಸಂಬಂಧಿಸಿದ ಇಂಜನೀಯರಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲಿ ಗ್ರಾಮಕ್ಕೆ ಆಲಮಟ್ಟಿ ನೀರಿನ ಸರಬರಾಜು ಮಾಡಲಾಗುವುದು ಇನ್ನು ಗ್ರಾಮದ ರಸ್ತೆ ನಿರ್ಮಾಣಕ್ಕೆ ಬೇಕಾದಷ್ಟು ಅನುದಾನ ಬಂದಿಲ್ಲ ಹೀಗಾಗಿ ರಸ್ತೆ ನಿರ್ಮಾಣಕ್ಕೆ ಒಂದಿಷ್ಟು ಸಮಯ ಬೇಕಾಗಿದೆ. ಆದರೆ ಖಂಡಿತವಾಗಿ ರಸ್ತೆ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಶಿವಾನಂದ ವಾಲೀಕಾರ, ಗ್ರಾಪಂ ಸದಸ್ಯ ಮಲ್ಲಪ್ಪ ಜಾಲಿಹಾಳ, ಕಾಶೀನಾಥ ಪುರಾಣಿಕಮಠ, ಯಲ್ಲಪ್ಪ ಬಸರಕೋಡ, ಎಸ್.ಎಂ. ಪಾಟೀಲ, ಆರ್.ಕೆ. ಜಾನಮಟ್ಟಿ, ಗಂಗಪ್ಪ ಚಿಣ್ಣನ್ನವರ, ಎಂ.ಜಿ. ಭಗವತಿ, ಪಿಡಿಓ ಆರತಿ ಕ್ಷತ್ರಿ, ಕೆಆರ್‍ಐಡಿಎಲ್ ಇಂಜನೀಯರ ಬಸವರಾಜ ಚಿಟಗುಪ್ಪಿ, ಎನ್.ವೈ. ಪತ್ತಾರ, ಮೋತಿಲಾಲ ರಾಠೋಡ ಹಾಗೂ ಶಾಲೆಯ ಶಿಕ್ಷಕರು ಇದ್ದರು.