ಮೂಲಭೂತ ಸೌಲಭ್ಯ ಶೀಘ್ರ
ಬ್ಯಾಡಗಿ,ಜೂ.27: ಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಶೀಘ್ರದಲ್ಲಿ ಕಲ್ಪಿಸಲಾಗುವುದು ಎಂದು ನೈರುತ್ಯ ರೈಲ್ವೇ ವಲಯದ ಮಹಾ ಪ್ರಬಂಧಕರಾದ ಅರವಿಂದ ಶ್ರೀವಾಸ್ತವ ತಿಳಿಸಿದ್ದಾರೆ.
ಹುಬ್ಬಳ್ಳಿಯ ರೈಲ್ವೇ ಸೌಧದ ಅವರ ಕಚೇರಿಯಲ್ಲಿ ಬ್ಯಾಡಗಿ ತಾಲೂಕ ರೈಲ್ವೇ ಪ್ರಯಾಣಿಕರ ಕ್ಷೇಮಭಿವೃದ್ಧಿ ಹಾಗೂ ಸುಧಾರಣಾ ಸಮಿತಿಯವರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಶೀಘ್ರದಲ್ಲಿಯೇ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿದ ಬ್ಯಾಡಗಿ ತಾಲೂಕ ರೈಲ್ವೇ ಪ್ರಯಾಣಿಕರ ಕ್ಷೇಮಭಿವೃದ್ಧಿ ಹಾಗೂ ಸುಧಾರಣಾ ಸಮಿತಿಯ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ ಅವರು, ಕಳೆದ ನಾಲ್ಕು ವರ್ಷಗಳಿಂದ ಧಾರವಾಡ ಬೆಂಗಳೂರು ಇಂಟರ್ಸಿಟಿ ರೈಲ್ವೇ ನಿಲುಗಡೆ ಬ್ಯಾಡಗಿ ನಿಲ್ದಾಣದಲ್ಲಿದೆ. ಇದರಿಂದ ಬಹಳ ಜನತೆಗೆ ಅನಕೂಲವಾಗಿದೆ. ಈ ರೈಲಿನ ನಿಲುಗಡೆಯನ್ನು ರದ್ದು ಮಾಡಬಾರದು ಎಂದರಲ್ಲದೇ, ನೂತನ ರೈಲ್ವೇ ನಿಲ್ದಾಣ ಕಟ್ಟಡ ಮಳೆಗಾಲದಲ್ಲಿ ಬಹಳಷ್ಟು ಸೋರುತ್ತಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ಆಸನಗಳಿಲ್ಲ. ಮಹಿಳೆಯರಿಗೆ ಹಾಗೂ ಪುರುಷರಿಗೆ ಶೌಚಾಲಯದ ಜೊತೆಗೆ ವಿಶ್ರಾಂತಿ ಕೊಠಡಿಗಳು ಇಲ್ಲದಿರುವುದು ಬಹು ದೊಡ್ಡ ಸಮಸ್ಯೆಯಾಗಿದೆ. ಪಾರ್ಕಿಂಗ್ ವ್ಯವಸ್ಥೆ, ಮಳೆ ಬಂದಾಗ ಸಂಪರ್ಕ ರಸ್ತೆಯ ತುಂಬೆಲ್ಲ ನೀರು ನಿಲ್ಲುವುದು, ಸೂಕ್ತವಾದ ಬೀದಿ ದೀಪಗಳ ವ್ಯವಸ್ಥೆಯಿಲ್ಲದಿರುವ ಬಗ್ಗೆ ವಿವರಿಸಿ, ಕಳೆದ ನಾಲ್ಕು ವರ್ಷಗಳಿಂದ ಪ್ರಮುಖವಾಗಿರುವ ವೇಗದ ರೈಲ್ವೇ ನಿಲುಗಡೆ ಮಾಡಿಲ್ಲ. ಡಬ್ಬಲ್ ಲೈನ್ ಅಗಲಿ ಮುಂದೆ ನಿಲುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದೀರಿ. ನಿಮ್ಮ ಭರವಸೆಯಂತೆ ಈಗ ರಾಣಿ ಚೆನ್ನಮ್ಮ. ಮೈಸೂರ ದಾದರ. ಯಶವಂತಪುರ ವಾಸ್ಕೋ ವೇಗದ ರೈಲ್ವೇಗಳ ನಿಲುಗಡೆ ಮಾಡಿ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಅರವಿಂದ ಶ್ರೀವಾಸ್ತವ ಅವರು ಧಾರವಾಡ ಬೆಂಗಳೂರು ಇಂಟರ್ಸಿಟಿ ರೈಲ್ವೇ ನಿಲುಗಡೆ ರದ್ದಾಗುವದಿಲ್ಲ. ಅದು ಮುಂದುವರೆಯುತ್ತದೆ ಎಂದು ಭರವಸೆ ನೀಡಿದರಲ್ಲದೇ, ಉಳಿದ ವೇಗದ ರೈಲ್ವೇಗಳ ನಿಲುಗಡೆ ಮಾಡಲು ಹಲವು ವಿಭಾಗಗಳ ಮಾಹಿತಿ ಪಡೆದು ರೈಲ್ವೇ ಬೋಡ್ರ್ಗೆ ಪತ್ರ ಬರೆದು ಕೋರಲಾಗುವುದು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಬಗ್ಗೆ ಮಾಹಿತಿ ಇದ್ದು ರೈಲ್ವೇ ಪ್ರಯಾಣಿಕರಿಗೆ ಇಲಾಖೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಿದೆ ಎಂದು ಖಚಿತ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆಯ ರೈಲ್ವೇ ಸಮಿತಿಯ ಅಧ್ಯಕ್ಷ ಹಾಗೂ ಜಿಡ್.ಆರ್.ಸಿ.ಸಿ. ಸದಸ್ಯರಾದ ಜಿ. ಕೆ ಅದಪ್ಪಗೌಡ್ರ. ಬ್ಯಾಡಗಿ ಸಮಿತಿಯ ಉಪಾಧ್ಯಕ್ಷ ಪರಶುರಾಮ ಮೇಲಗಿರಿ. ನಿರ್ದೇಶಕರ ಶಿವರಾಜ ಚೂರಿ ಉಪಸ್ಥಿತರಿದ್ದರು.