ಬೆಲೆ ಏರಿಕೆ, ಭ್ರಷ್ಠಾಚಾರ ತಡೆಯಲು ಸಿಪಿಐಎಂ ಆಗ್ರಹ.
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.27: ರಾಜ್ಯ ಸರ್ಕಾರದ ಆದಾಯವನ್ನು ಹೆಚ್ಚಿಸಿಕೊಳ್ಳಲು ಜನತೆಯ ಮೇಲೆ ವ್ಯಾಪಕವಾದ ಬೆಲೆ ಏರಿಕೆಯ ಹಾಗು ಕರ ಭಾರದ ಹೊರೆಯನ್ನು ಹೇರುವ ಮತ್ತು ಸಾರ್ವಜನಿಕ  ಭೂಮಿಯು ಸೇರಿದಂತೆ ಇತರೆ ಅಸ್ತಿತ್ವ ಮಾರಾಟಕ್ಕೆ ಕ್ರಮ ವಹಿಸಿರುವ ರಾಜ್ಯ ಸರ್ಕಾರದ ಕ್ರಮಗಳನ್ನು ಸಿಪಿಐಎಂ ತಾಲೂಕು ಸಮಿತಿ ಬಲವಾಗಿ  ಖಂಡಿಸುತ್ತದೆ. ಇವು ಬರಗಾಲದಿಂದ ತತ್ತರಿಸುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅವುಗಳನ್ನು ಕೂಡಲೆ ಕೈ ಬಿಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
.ಒಕ್ಕೂಟ ಸರ್ಕಾರದಿಂದ ಪಡೆಯ ಬೇಕಾದ ನ್ಯಾಯಯುತ ತೆರಿಗೆ ಪಾಲು ಮತ್ತು ತೆರಿಗೆ ಬಾಕಿ,ಬರ ಪರಿಹಾರದ ಬಾಕಿ ಪಡೆಯಲು ಮುಂದಾಗಬೇಕು. ದೊಡ್ಡ ಬಂಡವಾಳದಾರರಿಗೆ ನೀಡುವ  ಸಹಾಯಧನ ಕಡಿತ, ಶ್ರೀಮಂತರ ಮೇಲೆ ತೆರಿಗೆಗೆ ಕ್ರಮವಹಿಸಬೇಕು.
ಅದೇ ರೀತಿ, ಸಮುದಾಯ ಅಭಿವೃದ್ಧಿ ನಿಗಮ, ವರ್ಗಾವಣೆ ಹಾಗು ಭಡ್ತಿ ಮತ್ತು ಗುತ್ತಿಗೆ ಕಾಮಗಾರಿಗಳು ಮತ್ತು ಫಲಾನುಭವಿಗಳ ಆಯ್ಕೆ ಮುಂತಾದವು ಗಳಲ್ಲಿನ ಭ್ರಷ್ಠಾಚಾರವು ಜನತೆಗೆ ತೀವ್ರ  ಆತಂಕ ಕಾರಿಯಾಗಿವೆ. ಈ ಎಲ್ಲ ರೀತಿಯ ಭ್ರಷ್ಟಾಚಾರ ತಡೆಯುವಂತೆ ಸಿಪಿಐಎಂ ಆಗ್ರಹಿಸಿದೆ.
ಪೆಟ್ರೋಲ್ ಮತ್ತು ಡಿಸೈಲ್ ಹಾಗು ಹಾಲಿನ ಬೆಲೆ ಏರಿಕೆಯನ್ನು ವಾವಾಸು ಪಡೆಯಬೇಕು. ಬಸ್ ದರ,ಕುಡಿಯುವ ನೀರಿನ ದರ ಹಾಗು ಕಸ ವಿಲೇವಾರಿ ದರ ಏರಿಕೆಗಳ ಪ್ರಸ್ತಾಪಗಳು ಮತ್ತು ನಗದೀಕರಣದ ಹೆಸರಿನ ಸಾರ್ವಜನಿಕ ಭೂಮಿ ಮತ್ತಿತರೆ ಆಸ್ತಿಗಳ ಮಾರಾಟವನ್ನು ಕೈ ಬಿಡಬೇಕು.  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 187 ಕೋಟಿ ಹಗರಣವನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು. ಇತರೆ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿನ ಹಣಕಾಸು ನಿರ್ವಹಣೆಯನ್ನು ತನಿಖೆಗೆ ಕ್ರಮವಹಿಸಬೇಕು.
ಎಲ್ಲ ರೀತಿಯ ಗುತ್ತಿಗೆ ಹಾಗು ಗೌರವಧನ, ಅತಿಥಿ ಹೆಸರಿನ ಪದ್ಧತಿಯನ್ನು ರದ್ದುಗೊಳಿಸಬೇಕು ಮತ್ತು ಅವರ ಉದ್ಯೋಗವನ್ನು ಖಾಯಂ ಮಾಡಬೇಕು. ಸರ್ಕಾರದ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು. ಶಿಕ್ಷಣ  ಪೂರೈಸಿದ ಎಲ್ಲ ಯುವಜನರಿಗೆ ಉದ್ಯೋಗ ದೊರೆಯುವವರಿಗೆ ನಿರುದ್ಯೋಗ ಭತ್ಯೆ ಮಾಸಿಕ ಕನಿಷ್ಠ 10,000 ರೂ ಒದಗಿಸಬೇಕು.
ಸತತ ಬರಗಾಲ ಹಾಗು ಅತಿವೃಷ್ಠಿಗಳ ಹಿನ್ನೆಲೆಯಲ್ಲಿ ರೈತ,ಕೂಲಿಕಾರರ,ದಲಿತ ಹಾಗು ಮಹಿಳೆಯರ ಎಲ್ಲ ಸಾಲ ಮನ್ನಾ ಮಾಡಬೇಕು. ಬೆಳೆ ಹಾಗು ಉದ್ಯೋಗ ಪರಿಹಾರಗಳನ್ನು ನೀಡಬೇಕು.
ಉದ್ಯೋಗ ಖಾತ್ರಿ ಕೂಲಿಯನ್ನು ತಕ್ಷಣದಿಂದ ಕನಿಷ್ಟ 424 ರೂಗಳಿಗೆ ಹೆಚ್ಚಿಸಿ ಜಾರಿಗೊಳಿಸಬೇಕು ಸೇರಿದಂತೆ ಶ್ರಮಿಕರ ಜೀವನ ಸುಧಾರಿಸುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸಿದ ಸಂದರ್ಭದಲ್ಲಿ .ಕಾರ್ಯದರ್ಶಿ ಜೆ ಚಂದ್ರ ಕುಮಾರಿ, ಸದಸ್ಯರು ಯು ಯಾರ್ರಿ ಸ್ವಾಮಿ ಎಂ ತಿಪ್ಪೇಸ್ವಾಮಿ , ಬಿ ಪಿ ನವೀನ, ಎ ಮಲ್ಲಮ್ಮ , ರಾಣಿ ಎಲ್ಲಿಝಬಿತ್ , ವಿಜಯ ಲಕ್ಸ್ಮಿ , ವೆಂಕಟೇಶ್
ಜಿಲ್ಲಾ ಕಾರ್ಯ ದರ್ಶಿ ಜೆ ಸತ್ಯ ಬಾಬು, ಮತ್ತಿತರರು ಇದ್ದರು.