ದೊಡ್ಡ ಗಡಿಯಾರ ದುರಸ್ತಿಯಲ್ಲಿ ಹಗರಣ ಆರೋಪ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.27:- ದೊಡ್ಡ ಗಡಿಯಾರದ ದುರಸ್ತಿ ನೆಪದಲ್ಲಿ ಹಗರಣ ನಡೆಯುತ್ತಿದೆ ಎಂದು ಆರೋಪಿಸಿ ಗಂಧದಗುಡಿ ಫೌಂಡೇಷನ್ ವತಿಯಿಂದ ದೊಡ್ಡ ಗಡಿಯಾರದ ಬಳಿ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಪಾರಂಪರಿಕ ನಗರ. ಅದರ ಹೆಗ್ಗುರುತುಗಳಲ್ಲಿ ಒಂದಾದ ದೊಡ್ಡ ಗಡಿಯಾರ ದುರಸ್ತಿ ಕಾರ್ಯ ನಡೆಯುತ್ತಿದೆ. ಕಾಮಗಾರಿ ನೆಪದಲ್ಲಿ ಹಿಂದೆ ನಿರ್ಮಾಣಕ್ಕೆ ಬಳಸಿದ್ದ ಸುಣ್ಣ, ನದಿ ಮರಳು ಹಾಗೂ ಇತರೆ ಪದಾರ್ಥಗಳನ್ನು ಬಳಸದೆ ಎಂ ಸ್ಯಾಂಡ್, ಸಿಮೆಂಟ್ ಬಳಸಲಾಗುತ್ತಿದೆ. ಅರಮನೆಯ ಸುತ್ತಮುತ್ತ, ಕರಿಕಲ್ಲು ತೊಟ್ಟಿ ದ್ವಾರದ ದುರಸ್ತಿ ಕಾರ್ಯಕ್ಕೆ ನದಿ ಮರಳನ್ನೇ ಬಳಸಿದ್ದಾರೆ. ಆಯುರ್ವೇದ ಕಾಲೇಜು ಕಟ್ಟಡ, ಕಾಡಾ ಕಟ್ಟಡ, ಸರ್ಕಾರಿ ಅತಿಥಿ ಗೃಹ, ವೆಲ್ಲಿಂಗ್ಟನ್ ಲಾಡ್ಜ್ ದುರಸ್ತಿಗೆ ಹಿಂದೆ ಬಳಸಿದ್ದ ವಸ್ತುಗಳನ್ನೇ ಬಳಸಿದ್ದಾರೆ. ಆದರೆ, ದೊಡ್ಡ ಗಡಿಯಾರಕ್ಕೆ ನದಿ ಮರಳು, ಸುಣ್ಣದ ಗಾರೆ ಬದಲು ಎಂ ಸ್ಯಾಂಡ್, ಸಿಮೆಂಟ್ ಉಪಯೋಗಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಅದನ್ನು ನಿಲ್ಲಿಸಿ ಗಡಿಯಾರ ನಿರ್ಮಾಣಕ್ಕೆ ಹಿಂದೆ ಬಳಸಿದ್ದ ವಸ್ತುಗಳನ್ನೇ ಬಳಸಬೇಕು. ಯಾವುದೇ ಹಗರಣ ಮಾಡದೆ ದೊಡ್ಡ ಗಡಿಯಾರ ಸಂರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಫೌಂಡೇಷನ್ ಗೌರವಾಧ್ಯಕ್ಷ ನಾಗೇಂದ್ರ ಪ್ರಸಾದ್, ರಾಜ್ಯಾಧ್ಯಕ್ಷ ಆರ್ಯನ್ ಗಂಧದಗುಡಿ, ಆರ್.ಗೌಡ, ರಾಜ್ಯ ಉಪಾಧ್ಯಕ್ಷ ಮನೋಹರ್ ಗೌಡ, ರಾಜ್ಯ ಸಂಚಾಲಕ ರತನ್ ಚಿಕ್ಕು, ಜಿಲ್ಲಾ ಉಪಾಧ್ಯಕ್ಷ ಗೌತಮ್, ಪದಾಧಿಕಾರಿಗಳಾದ ಶೈಲಜೇಶ್, ರವಿ ಕೀರ್ತಿ, ಸಿಂಧು, ಶ್ರೀನಿವಾಸ್, ಯಶೋಧ.ಆರ್, ಪೃಥ್ವಿ, ಮಧು ಮಾಲತಿ, ಅಭಿನಂದನ್ ಅರಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.