ಎಪ್ಸನ್‌ನಿಂದ 3.5 ಕೋಟಿರೂ ಮೊತ್ತದ ನೋಟ್ ಪುಸ್ತಕ,ಫಿಲ್ಟರ್,ಸ್ಮಾರ್ಟ್‌ಕ್ಲಾಸ್ ಕೊಡುಗೆ
ಕೋಲಾರ,ಜೂ,೨೭- ಕಲಿಕೆಗೆ ಶ್ರದ್ಧೆ,ಛಲ, ನಿರ್ಧಿಷ್ಟ ಗುರಿಯಿದ್ದರೆ ಸಾಕು, ಕಷ್ಟಪಟ್ಟು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿಯುವುದು ಮುಖ್ಯ, ಖುಷಿಯಿಂದ ಸಾಧನೆಯತ್ತ ಮುನ್ನುಗ್ಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಎಪ್ಸನ್ ಕಂಪನಿ ಅಧ್ಯಕ್ಷ ಎನ್.ಸಾಂಬಮೂರ್ತಿ ಕರೆ ನೀಡಿದರು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಎಪ್ಸನ್ ಕಂಪನಿ,ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್ ಮತ್ತು ಶಿಕ್ಷಕ ಗೆಳೆಯರ ಬಳಗದ ಸಹಯೋಗದಲ್ಲಿ ಎಪ್ಸನ್ ಕಂಪನಿಯಿಂದ ಕೋಲಾರ ಜಿಲ್ಲೆಯ ೪೨೪೮೦ ಸರ್ಕಾರಿ ಶಾಲಾ ಮಕ್ಕಳಿಗೆ ೩.೫ ಕೋಟಿ ಮೊತ್ತದ ೨.೩೫ ಲಕ್ಷ ನೋಟ್ ಪುಸ್ತಕ, ೧೨ಸಾವಿರ ಶಾಲಾ ಬ್ಯಾಗ್, ೭೭ಶಾಲೆಗಳಿಗೆ ಶುದ್ದಕುಡಿಯುವ ನೀರಿನ ಫಿಲ್ಟರ್, ೫೦ ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್‌ಗಳನ್ನು ಕೊಡುಗೆಯಾಗಿ ವಿತರಿಸಿ ಅವರು ಮಾತನಾಡುತ್ತಿದ್ದರು.
ನಿಮ್ಮ ತಂದೆತಾಯಿಯ ಆಶಯ ನಿಜವಾಗಿಸಿ, ನಿಮ್ಮ ಕನಸಿಗೆ ನೋಟ್ ಪುಸ್ತಕ,ಬ್ಯಾಗ್ ನಮ್ಮ ಚಿಕ್ಕ ಕಾಣಿಕೆಯಷ್ಟೆ, ಸಮಾಜ,ದೇಶಕ್ಕೆ ಕೊಡುಗೆ ನೀಡುವ ರೀತಿಯಲ್ಲಿ ನಿಮ್ಮ ಸಾಧನೆ ಮುಂದುವರೆಸಿ, ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ ಎಂದು ತಿಳಿಸಿದರು.
ಪ್ರತಿ ವಿದ್ಯಾರ್ಥಿಯಲ್ಲೂ ಅಗಾಧವಾದ ಶಕ್ತಿ ಇದೆ, ಅದುನ್ನು ಹೊರತರುವ ಕೆಲಸವಾಗಬೇಕು, ನೀವು ಸಾಧನೆಯ ಛಲದೊಂದಿಗೆ ಮುನ್ನುಗ್ಗಿದರೆ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಜ್ಞಾನ,ಶೈಕ್ಷಣಿಕ ಸಾಧನೆ ಇದ್ದರೆ ಹಣ ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ ಎಂದರು.
ಶಾಲೆ ಬಲವರ್ಧನೆಗೆ ಸಹಕಾರಿ-
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಈ ವರ್ಷವೊಂದರಲ್ಲೇ ೩.೫ ಕೋಟಿ ರೂ ವೆಚ್ಚದ ನೆರವನ್ನು ಸರ್ಕಾರಿ ಶಾಲೆಗಳಿಗೆ ಎಪ್ಸನ್ ಕಂಪನಿ ಹರಿಸಿದೆ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಮತ್ತು ಬಲವರ್ಧನೆಗೆ ಇದು ಸಹಕಾರಿಯಾಗಿದೆ ಎಂದು ತಿಳಿಸಿ ಧನ್ಯವಾದ ಸಲ್ಲಿಸಿ, ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಿಗೂ ಸ್ಮಾರ್ಟ್ ಕ್ಲಾಸ್ ಒದಗಿಸಲು ಕೋರಿದರು.
ಎಪ್ಸನ್ ಕಂಪನಿ ಅಧಿಕಾರಿ ನವೀನ್ ಶೆಟ್ಟಿ ಮಾತನಾಡಿ, ನಾವು ಪ್ರತಿವರ್ಷ ನಿಮ್ಮ ನೆರವಿಗೆ ಬರುತ್ತೇವೆ, ನೀವು ದೊಡ್ಡ ಕನಸು ಕಾಣಿ, ಆ ಕನಸನ್ನು ನನಸಾಗಿಸಿಕೊಳ್ಳಲು ಪರಿಶ್ರಮ,ಛಲದಿಂದ ಓದಿ ಎಂದುಕಿವಿಮಾತು ಹೇಳಿ, ನಾವು ನೀಡುತ್ತಿರುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಖಾಸಗಿ ಪೈಪೋಟಿಗೆ ಎದುರಾಗಿ ಸದೃಢಗೊಳಿಸುವ ಕಾರ್ಯಕ್ಕೆ ನೆರವಾಗುತ್ತಿರುವ ಎಪ್ಸನ್ ಕಂಪನಿಯ ಸಹಕಾರವನ್ನು ಪ್ರಶಂಶಿಸಿ, ಬಳಗ ನೀವು ನೀಡಿರುವ ಸೌಲಭ್ಯಗಳನ್ನು ಶಾಲಾ ಮಕ್ಕಳಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಎಪ್ಸನ್ ಕಂಪನಿ ೮ ವರ್ಷಗಳಿಂದ ಕೋಲಾರ ತಾಲ್ಲೂಕಿನ ಎಲ್ಲಾ ಶಾಲೆಗಳು, ಮಾಲೂರು,ಮುಳಬಾಗಿಲು,ಶ್ರೀನಿವಾಸಪುರ ಆಯ್ದ ಶಾಲೆಗಳಿಗೆ ನೆರವು ನೀಡುತ್ತಿದೆ.
ಬಾಲಕಿಯರ ಪಿಯು ಕಾಲೇಜು ಉಪಪ್ರಾಂಶುಪಾಲೆ ಮಂಜುಳಾ, ಸರ್ಕಾರಿ ಶಾಲೆಗಳಿಗೆ ನೆರವಾಗುವ ಹೃದಯಂತಿಕೆಗೆ ಧನ್ಯವಾದ ತಿಳಿಸಿ, ನಮ್ಮ ಮಕ್ಕಳಿಗೆ ಶುದ್ದ ಕುಡಿಯುವ ನೀರು, ಸುಸಜ್ಜಿತ ಸ್ಮಾರ್ಟ್ ಕ್ಲಾಸ್ ಸೌಲಭ್ಯ, ನೋಟ್ ಪುಸ್ತಕ, ವಿಜ್ಞಾನ ಕಿಟ್ ನೆರವು ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ವಿದ್ಯಾರ್ಥಿನಿಯರಾದ ಅಂಕಿತಾ, ಜುನೇರಾ ಮರಿಯಂ ಅನಿಸಿಕೆ ತಿಳಿಸಿ ತಮ್ಮ ಕಲಿಕೆಗೆ ನೆರವಾಗುತ್ತಿರುವ ಎಪ್ಸನ್‌ಗೆ ಧನ್ಯವಾದ ಅರ್ಪಿಸಿದರು. ಶಿಕ್ಷಕಿ ಎನ್.ಎಸ್.ಭಾಗ್ಯ ಸ್ವಾಗತಿಸಿ, ಶಿಕ್ಷಕಿ ಪ್ರಮೀಳಾ ನಿರೂಪಿಸಿದರು.
ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್‌ನ ಹರೀಶ್, ಅನಿಲ್ ಜೋಷಿ, ಎಪ್ಸನ್ ಕಂಪನಿಯ ಅಧಿಕಾರಿಗಳಾದ ವಿನಯ್‌ಕುಮಾರ್ ರೆಡ್ಡಿ, ರಾಜೇಂದ್ರಕುಮಾರ್, ವಿಜಯ್‌ಗೋವಿಂದ್ ಅಶೋಕ್ ಕುಮಾರ್‌ದಾಸ್, ಗೋಪಾಲಕೃಷ್ಣ, ನವೀನ್ ಶೆಟ್ಟಿ, ವೇಲನ್, ಶ್ರೀಧರನ್,ಬೈರೇಶ್,ರಾಮಪ್ರಸಾದ್,ಪ್ರಭಾಕರನ್,ಅರ್ಬಾಸ್‌ಖಾನ್,ಚಂದ್ರಶೇಖರ್, ಶಿಕ್ಷಕ ಗೆಳೆಯರ ಬಳಗದ ವೆಂಕಟಾಚಲಪತಿಗೌಡ, ಸಿಆರ್‌ಪಿ ಗೋವಿಂದ್,ಚಂದ್ರಪ್ಪ, ಹನುಮಾನ್ ಸಿಂಗ್, ನಾರಾಯಣಸ್ವಾಮಿ, ಕೋಟೇಶ್ವರ ರಾವ್, ಮುನಿರಾಜು, ಚಿಕ್ಕಣ್ಣ, ಸೋಮಶೇಖರ್,ಕೃಷ್ಣಪ್ಪ ಮತ್ತು ಶಿಕ್ಷಕರು ಹಾಜರಿದ್ದರು.