ಹಾಲಿನ ಬೆಲೆ ಏರಿಕೆ, ಕಾಂಗ್ರೆಸ್ ಅಸಲಿ ಮುಖ ಪ್ರದರ್ಶನ
ಕೋಲಾರ,ಜೂ.೨೭- ಹಾಲಿನ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆ ನಂತರ ತನ್ನ ಅಸಲಿ ಮುಖ ತೋರಿಸುತ್ತಿದೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಹಾಗೂ ನಗರಸಭೆ ಸದಸ್ಯ ಪ್ರವೀಣ್ ಗೌಡ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜನಸಾಮಾನ್ಯರು ನಿತ್ಯ ಉಪಯೋಗಿಸುವ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ತಣ್ಣೀರು ಹಾಕುವ ಕೆಲಸ ಮಾಡುತ್ತಿದೆ, ಬಡವರ ಜೀವನ ಉದ್ದಾರ ಮಾಡುತ್ತೇವೆ ಎಂದು ಐದು ಉಚಿತ ಗ್ಯಾರಂಟಿ ಯೋಜನೆಗಳ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ದಿನನಿತ್ಯದ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ತನ್ನ ನಿಜವಾದ ಜನವಿರೋಧಿ ನೀತಿಯನ್ನು ಬಹಿರಂಗಪಡಿಸಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ನೊಂದಣಿ ಮುದ್ರಾಂಕ ಶುಲ್ಕವನ್ನು ಹೆಚ್ಚಿಸಲಾಯಿತು. ನಂತರ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿ ಮಧ್ಯಮ ವರ್ಗದ ಜನರ ಜೋಬಿಗೆ ಕತ್ತರಿ ಹಾಕಿದರು. ಇದೀಗ ಹಾಲಿನ ಬೆಲೆ ಏರಿಸುವ ಮೂಲಕ ಬಡವರು ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಬರೆ ಎಳೆದಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಒಂದೊಂದೆ ವಸ್ತುಗಳ ಮೇಲೆ ಬೆಲೆ ಏರಿಸುವ ಮೂಲಕ ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಿತ್ತುಕೊಳ್ಳವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ, ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೊಡಲೇ ಹಾಲಿನ ಬೆಲೆ ಏರಿಕೆ ಆದೇಶಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಸರಿಯಾದ ಫಲಾನುಭವಿಗಳಿಗೂ ಸಿಗುತ್ತಿಲ್ಲ. ಒಂದು ಕಡೆ ಅಭಿವೃದ್ಧಿ ಕುಂಠಿತ ಮತ್ತೊಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಈಗೇ ಮುಂದುವರೆದರೆ ರಾಜ್ಯದಲ್ಲಿ ದೊಡ್ಡ ದೊಡ್ಡ ಅಭಿವೃದ್ಧಿ ಯೋಜನೆಗಳು ಜಾರಿಯಾಗಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.