ದರ ಏರಿಕೆ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.27:- ಪೆಟ್ರೋಲ್, ಹಾಲಿನ ಬೆಲೆ ಏರಿಕೆ ವಾಪಸ್ ಪಡೆಯಬೇಕು. ಬಸ್ ದರ, ಕುಡಿಯುವ ನೀರಿನ ಹಾಗೂ ಕಸ ವಿಲೇವಾರಿ ದರ ಏರಿಕೆಗಳ ಪ್ರಸ್ತಾಪಗಳು ಮತ್ತು ನಗದೀಕರಣದ ಹೆಸರಿನ ಸಾರ್ವಜನಿಕ ಭೂಮಿ ಮತ್ತಿತರೆ ಆಸ್ತಿಗಳ ಮಾರಾಟ ಕೈ ಬಿಡುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ (ಮಾಕ್ರ್ಸ್‍ವಾದಿ) ಜಿಲ್ಲಾ ಸಮಿತಿ ವತಿಯಿಂದ ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಸಲಾಯಿತು.
ಒಕ್ಕೂಟ ಸರ್ಕಾರದಿಂದ ಪಡೆಯಬೇಕಾದ ನ್ಯಾಯಯುತ ತೆರಿಗೆ ಪಾಲು ಮತ್ತು ತೆರಿಗೆ ಬಾಕಿ, ಬರ ಪರಿಹಾರದ ಬಾಕಿ ಪಡೆಯಬೇಕು. ದೊಡ್ಡ ಬಂಡವಾಳದಾರರಿಗೆ ನೀಡುವ ಸಹಾಯಧನ ಕಡಿತ, ಶ್ರೀಮಂತರ ಮೇಲಿನ ತೆರಿಗೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ನೂರು ಕೋಟಿ ಹಗರಣವನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು. ಇತರೆ ಸಮುದಾಯಗಳ ಅಭಿವೃದ್ಧಿ ನಿಮಗಳಲ್ಲಿನ ಹಣಕಾಸು ನಿರ್ವಹಣೆಯ ತನಿಖೆಗೆ ಕ್ರಮವಹಿಸಬೇಕು. ಭೂ ಹಂಚಿಕೆಯನ್ನು ಭೂ ಸ್ವಾಧೀನ ಕ್ರಮಗಳ ಮೂಲಕ ಮತ್ತು ಈ ಸಮುದಾಯದ ಫಲಾನುಭವಿಗಳಿಗಾಗಿ ಪ್ರತಿ ವರ್ಷ ಅರ್ಜಿ ಕರೆಯುವುದನ್ನು ನಿಲ್ಲಿಸಬೇಕು. ಪ್ರತಿ ತಾಲೂಕಿನಲ್ಲಿ ಕನಿಷ್ಠ 500 ಎಕರೆ ಜಮೀನು ಒದಗಿಸಬೇಕು. ದುರ್ಬಲರಿಗೆ ಪುನರ್ವಸತಿ ನೀಡಲು ಗಣತಿ ಮಾಡಿ ಈ ಎಲ್ಲರಿಗೂ ಒಂದೆಡೆಯಿಂದ ಆದ್ಯತೆ ನೆರವು ಕೊಡಬೇಕು.
ಪೂರ್ವ ಪ್ರಾಥಮಿಕ ಶಾಲೆಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕವೇ ನಡೆಸಬೇಕು. ಶಿಕ್ಷಣ ಇಲಾಖೆಗೆ ನೀಡುವ ಆದೇಶ ವಾಪಸ್ ಪಡೆಯಬೇಕು. ಅಂಗವನಾಡಿ ಕೇಂದ್ರಗಳನ್ನು ಮತ್ತಷ್ಟು ಬಲಪಡಿಸಬೇಕು. ಅಕಾಡೆಮಿ ಮತ್ತು ಪ್ರಾಧಿಕಾರಿಗಳ ಸ್ವಾಯತ್ತತೆ ಬಲಪಡಿಸಬೇಕು. ಅವುಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ರಾಜಕೀಯ ದಾಳಗಳಂತೆ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ರೀತಿಯ ಗುತ್ತಿಗೆ ಹಾಗೂ ಗೌರವಧನ ಅತಿಥಿ ಹೆಸರಿನ ಪದ್ಧತಿ ರದ್ದುಗೊಳಿಸಬೇಕು. ಉದ್ಯೋಗ ಕಾಯಂ ಮಾಡಬೇಕು. ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಶಿಕ್ಷಣ ಪೂರೈಸಿದ ಎಲ್ಲ ಯುವಜನರಿಗೆ ಉದ್ಯೋಗ ದೊರೆಯುವವರಿಗೆ ನಿರುದ್ಯೋಗ ಭತ್ಯೆಯನ್ನು ಕನಿಷ್ಠ 10 ಸಾವಿರ ರೂ. ಕೊಡಬೇಕು. ಸತತ ಬರಗಾಲ ಹಾಗೂ ಅತಿವೃಷ್ಟಿಗಳ ಹಿನ್ನೆಲೆಯಲ್ಲಿ ರೈತ, ಕೂಲಿಕಾರರ, ದಲಿತ ಹಾಗೂ ಮಹಿಳೆಯರ ಎಲ್ಲ ಸಾಲ ಮನ್ನಾ ಮಾಡಬೇಕು. ಬೆಳೆ ಹಾಗೂ ಉದ್ಯೋಗ ಪರಿಹಾರಗಳನ್ನು ನೀಡಬೇಕು. ಉದ್ಯೋಗ ಖಾತ್ರಿ ಕೂಲಿಯನ್ನು 242 ರೂ.ಗಳಿಗೆ ಹೆಚ್ಚಿಸಿ ಜಾರಿಗೊಳಿಸಬೇಕು. ಮಾಸಿಕ ಪಿಂಚಣಿ ಸಹಾಯಧನವನ್ನು 6 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾದ ಕೆ.ಬಸವರಾಜ್, ಜಿ.ಜಯರಾಂ, ಎನ್.ವಿಜಯ್ ಕುಮಾರ್, ಸ್ಥಳೀಯ ಸಮಿತಿ ಕಾರ್ಯದರ್ಶಿ ಜಿ.ರಾಜೇಂದ್ರ, ಸದಸ್ಯರಾದ ಸುಬ್ರಮಣ್ಯ, ಶ್ರೀಧರ್, ಆರ್. ಸುಬ್ರಹ್ಮಣ್ಯ, ವಿಜಯ್ ಕುಮಾರ್, ವರುಣಾ ನಾಗರಾಜ್, ಪುಟ್ಟಮಲ್ಲಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.