ಕಬಿನಿ ಒಳಹರಿವು ಹೆಚ್ಚಳ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.27:- ಕೇರಳದ ವಯನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಕಂಡು ಬಂದಿದೆ.
ಕಳೆದ ಮೂರು ದಿನಗಳಿಂದ ಕೇರಳದ ವಯನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಕಬಿನಿ ಜಲಾಶಯ ಭರ್ತಿಯತ್ತ ಸಾಗಿದೆ. ಜಲಾಶಯದ ಇಂದಿನ ಒಳಹರಿವು 6 ಸಾವಿರ ಕ್ಯೂಸೆಕ್ಸ್‍ಗಳಾಗಿದ್ದು, ಹೊರಹರಿವನ್ನು 1000 ಕ್ಯೂಸೆಕ್ಸ್‍ಗಳಿಗೆ ಏರಿಕೆ ಮಾಡಲಾಗಿದೆ.
ಮುಂಗಾರು ಶುರುವಾದ ನಂತರದಲ್ಲಿ ಮೊದಲ ಬಾರಿಗೆ ಜಲಾಶಯದ ಒಳಹರಿವು ಈ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. 84 ಅಡಿ ಸಾಮರ್ಥ್ಯವಿರುವ ಜಲಾಶಯದ ಇಂದಿನ ನೀರಿನ ಮಟ್ಟ 66.27 ಅಡಿಗಳಾಗಿದೆ. ನಿನ್ನೆ ಒಂದೇ ದಿನ 1.5 ಅಡಿಗಳು ಹೆಚ್ಚಳವಾಗಿದ್ದು, ಜಲಾಶಯದಿಂದ 1000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
ಮುಂಗಾರು ಮಳೆ ಹೀಗೆಯೇ ಮುಂದುವರಿದರೆ ಜಲಾಶಯ ಇನ್ನು 8 ದಿನಗಳ ಒಳಗಾಗಿ ಸಂಪೂರ್ಣ ಭರ್ತಿಯಾಗಲಿದೆ ಎನ್ನಲಾಗಿದ್ದು, ಯಾವುದೇ ಕ್ಷಣಗಳಲ್ಲಾದರೂ ಡ್ಯಾಂನಿಂದ ಕಪಿಲಾ ನದಿಗೆ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಜಲಾಶಯದಿಂದ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವುದರಿಂದ ಕಪಿಲಾ ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತವಾಗಲಿವೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮೈಸೂರಿನಲ್ಲಿ ದಿನವಿಡೀ ಮಳೆ:
ನಗರದಲ್ಲಿ ಬುಧವಾರ ಮುಂಜಾನೆಯಿಂದಲೂ ಭಾರೀ ಮಳೆ ಸುರಿದಿದ್ದು, ಕೆಲಸ ಕಾರ್ಯಕ್ಕೆ ಹೋಗುವವರು ಹಾಗೂ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಾಕಷ್ಟು ಪರದಾಟ ನಡೆಸಿದರು. ಕೆಲವು ಕಡೆ ಭಾರೀ ಮಳೆಗೆ ರಸ್ತೆಯಲ್ಲೇ ಮಳೆ ನೀರು ನಿಂತು ವಾಹನ ಸವಾರರು ಸಂಚರಿಸಲು ಸಾಧ್ಯವಾಗದೆ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಇನ್ನು ಕೆಲವು ಕಡೆ ಚರಂಡಿ ನೀರು ಹಾಗೂ ಮಳೆ ನೀರು ಸೇರಿ ರಸ್ತೆಯ ಮೇಲೆಯೇ ಹರಿಯುತ್ತಿದ್ದು, ದಿನವಿಡೀ ಸುರಿದ ಮಳೆಗೆ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು.