ಜನತಾದರ್ಶನ ಉತ್ತಮ ಕಾರ್ಯಕ್ರಮ: ಹೆಚ್.ಟಿ.ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.27: ಅಧಿಕಾರಿಗಳು ಮಾಡಿರುವ ತಪ್ಪಿಗೆ ಪರಿತಪಿಸುತ್ತಿರುವ ರೈತಾಪಿವರ್ಗದ ಜನರಿಗೆ ಸೂಕ್ತ ಪರಿಹಾರ ಒದಗಿಸಲು ಜನತಾದರ್ಶನ ಉತ್ತಮವಾದ ಕಾರ್ಯಕ್ರಮವಾಗಿದ್ದು ಇಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳು ಕಡ್ಡಾಯವಾಗಿ ಅನುಪಾಲನೆ ಮಾಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಜನತಾದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬದ್ದತೆಯಿಂದ ಕೆಲಸ ಮಾಡಿದರೆ ರೈತರ ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟವೇನಲ್ಲ. ರೈತ ನಮಗೆಲ್ಲಾ ಅನ್ನ ನೀಡುವ ಅನ್ನದಾತ ಅವನಿಗೆ ಮೋಸ ಮಾಡಿದರೆ ನಿಮಗೆ ಖಂಡಿತವಾಗಿಯೂ ಒಳ್ಳೆಯದಾಗುವುದಿಲ್ಲ. ತಾಲ್ಲೂಕಿನಲ್ಲಿ ಮತ್ತು ಜಿಲ್ಲೆಯಲ್ಲಿ ಕ್ರಿಯಾಶೀಲ ಜಿಲ್ಲಾಧಿಕಾರಿ ಹಾಗೂ ತಹಸಿಲ್ದಾರ್ ಕಾರ್ಯನಿರ್ವಹಿಸುತ್ತಿದ್ದರೂ ಸಮಸ್ಯೆಗಳು ಬೆಟ್ಟದಷ್ಟಿವೆ ಎಂದರೆ ಸಮಸ್ಯೆಗಳ ಪ್ರಮಾಣ ಎಷ್ಟಿವೆ ಎಂಬುದನ್ನು ಒಮ್ಮೆ ಅವಲೋಕಿಸಿ. ತಾಲ್ಲೂಕು ಮಟ್ಟದ ಕಂದಾಯ ಇಲಾಖೆಯ ಕೆಲ ಸಿಬ್ಬಂದಿಗಳ ಅಸಡ್ಡೆಯಿಂದ, ಈ ಸಮಸ್ಯೆಗಳು ತಲೆದೋರಿವೆ. 70% ಪ್ರಮಾಣದ ಸಮಸ್ಯೆಗಳು ಪೌತಿ ಖಾತೆ, ಜಮೀನಿಗೆ ಸಂಬಂಧಿಸಿವೆ. 20-30 ವರ್ಷಗಳು ಕಳೆದರೂ ನಮ್ಮ ಪೂರ್ವಜರ ಹೆಸರಿನಲ್ಲಿಯೇ ಇನ್ನೂ ಆಸ್ತಿ ಬಾಗವಾಗದೇ ಇರುವುದು ಎಲ್ಲರಿಗೂ ನಾಚಿಕೆಗೇಡಿನ ಸಂಗತಿ. ಇದರಿಂದಾಗಿ ಹತ್ತಾರು ಸಮಸ್ಯೆಗಳು ಎದುರಾಗುತ್ತಿವೆ. ಸರ್ಕಾರಿ ಆಸ್ತಿಗಳನ್ನು ರಕ್ಷಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಇದರಲ್ಲಿ ಲೋಪ ಕಂಡುಬಂದರೆ ನಾನು ಕ್ಷಮಿಸುವುದಿಲ್ಲ. ಜನಸ್ಪಂದನಾ ಕಾರ್ಯಕ್ರಮದಲ್ಲಿ ರೈತರುಗಳು ನೀಡಿರುವ ಅಹವಾಲುಗಳನ್ನು ಇಲಾಖಾವಾರು ಅಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರವಾಗಿ ಬಗೆಹರಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ:ಕುಮಾರ ಮಾತನಾಡಿ ಇಂದು ರೈತರುಗಳು ನೀಡಿರುವ ಅರ್ಜಿಗಳನ್ನು ತಂತ್ರಾಂಶದಲ್ಲಿ ಅಳವಡಿಸಿ ಅವುಗಳ ಅನುಪಾಲನೆ ಮಾಡಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ತಾವು ಸಲ್ಲಿಸಿದ ಅರ್ಜಿಗಳ ಕುರಿತಂತೆ ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದನ್ನು ಜನರು ಆನ್‍ಲೈನ್ ಮೂಲಕ ಪರಿಶೀಲಿಸಲು ಅನುಕೂಲವಾಗುವಂತೆ ಐ.ಪಿ.ಜಿ.ಆರ್.ಎಸ್‍ನಲ್ಲಿ ಅಪ್‍ಲೋಡ್ ಮಾಡಲಾಗುವುದು. ಇದರಿಂದ ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವುದರ ಜೊತೆಗೆ ಆನ್‍ಲೈನ್ ಮೂಲಕ ಪರಿಶೀಲಿಸಲು ಅನುಕೂಲ ಮಾಡಿ ಕೊಡಲಾಗುತ್ತಿದೆ. ಸಾರ್ವಜನಿಕರು ಜನ ಸ್ಪಂದನಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ಜನಸ್ಪಂದನ ಸಭೆಯಲ್ಲಿ ಬಂದ ಅರ್ಜಿಗಳ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಅಥವಾ ತಾಲೂಕು ಮಟ್ಟದಲ್ಲಿ ಬಗೆಹರಿಸುವಂತಿದ್ದಲ್ಲಿ ಕೂಡಲೇ ಅವುಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲವೊಮ್ಮೆ ದೊಡ್ಡ ಸಮಸ್ಯೆಗಳಿದ್ದಲ್ಲಿ ಅಥವಾ ಸರಕಾರದ ಅನುದಾನದ ಅವಶ್ಯಕತೆ ಇದ್ದಲ್ಲಿ ಅಂತಹವುಗಳನ್ನು ಸರಕಾರದ ಮಟ್ಟದಲ್ಲಿ ಬಗೆಹರಿಸಲು ಕಳುಹಿಸಿ ಕೊಡಲಾಗುವುದು ಎಂದರು.
ತಾಲೂಕು ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಮಾತನಾಡಿ ಸಾರ್ವಜನಿಕರ ಮತ್ತು ಜಾನುವಾರುಗಳ ರಕ್ಷಣೆಗಾಗಿ ತಾಲೂಕಿನಲ್ಲಿರುವ ಪ್ರತಿ ನಾಲೆಗಳಿಗೆ ರಕ್ಷಣಾ ಕಲ್ಲು ಅಳವಡಿಸಬೇಕು ಕೃಷಿ ಇಲಾಖೆಯಲ್ಲಿ ಅರ್ಹ ರೈತರಿಗೆ ಬಾಡಿಗೆಗೆ ಸಲ್ಲಬೇಕಿದ್ದ ಕೃಷಿ ಉಪಕರಣ ನೀಡುತ್ತಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಫಲಾನುಭವಿಗಳು ಲಂಚ ನೀಡಬೇಕಾಗಿದೆ. ಬೂಕನಕೆರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನಿವಾರಿಸಿ. ಮೆಗಾಫುಡ್ ಪಾರ್ಕ್ ಬಳಿ ಕಾರ್ಖಾನೆಗಳ ತ್ಯಾಜ್ಯ ನೀರು ಹಾಗೂ ಘನ ತ್ಯಾಜ್ಯವನ್ನು ಸಂಸ್ಕರಣೆ ಮಾಡದೇ, ರೈತರ ಜಮೀನಿಗೆ ಹಾಗೂ ಕೆರೆ ಕಟ್ಟೆಗಳಿಗೆ ನೇರವಾಗಿ ಬಿಡಲಾಗುತ್ತಿದೆ ಹಲವು ಬಾರಿ ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗುತ್ತಿಲ್ಲ. ಕೋರಮಂಡಲ ಸಕ್ಕರೆ ಕಾರ್ಖಾನೆಯು ಸರ್ಕಾರಕ್ಕೆ ಸಮರ್ಪಕ ತೆರಿಗೆ ನೀಡದೆ ವಂಚಿಸುತ್ತಿದೆ. ಇದರವಿರುದ್ದ ಕ್ರಮ ಕೈಗೊಳ್ಳಬೇಕು ಎಂದರು.
ಜನತಾದರ್ಶನದಲ್ಲಿ 156 ಅರ್ಜಿ ಸ್ವೀಕರಿಸಿ, ಸ್ಥಳದಲ್ಲೇ ಕೆಲ ಸಾರ್ವಜನಿಕರ ಸಮಸ್ಯೆಗಳನ್ನ ಬಗೆಹರಿಸಲಾಯಿತು. ಪೌತಿ ಖಾತೆ ಇ-ಸ್ವತ್ತು ಸೇರಿದಂತೆ ವಿವಿಧ ಹಕ್ಕು ಪತ್ರಗಳನ್ನ ಅರ್ಹ ಸಾರ್ವಜನಿಕರಿಗೆ ವಿತರಿಸಲಾಯಿತು.
ಜನತಾದರ್ಶನದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಶೇಕ್‍ತನ್ವಿರ್ ಆಸೀಫ್, ಡಿ.ವೈ.ಎಸ್.ಪಿ ಸುಮಿತ್, ಉಪವಿಭಾಗಧಿಕಾರಿ ಎಲ್.ಎಂ.ನಂದೀಶ್, ತಹಶೀಲ್ದಾರ್ ನಿಸರ್ಗಪ್ರಿಯ, ತಾಪಂ ಇಓ ಸತೀಶ್, ರಾಜಸ್ವ ನಿರೀಕ್ಷಕರಾದ ಜ್ಞಾನೇಶ್, ಚಂದ್ರಕಲಾ, ಗೋಪಾಲಕೃಷ್ಣ, ನರೇಂದ್ರ, ಶಾಸಕರ ಆಪ್ತಸಹಾಯಕ ಪ್ರತಾಪ್, ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.