ಪ್ರಾಣ ಹಾನಿ ತಪ್ಪಿಸಲು “ವೆಲ್‌ನೆಸ್ ಆನ್ ವೀಲ್ಸ್” ಯೋಜನೆ
ವಿಜಯಪುರ,ಜೂ೨೭: ರಾಜ್ಯ ಸರ್ಕಾರದ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ನಾರಾಯಣ ಹೃದಯಾಲಯ ಹಾಗೂ ವೋಲ್ವೋ ಕಂಪನಿಗಳ ಸಹಕಾರದೊಂದಿಗೆ ವೆಲ್‌ನೆಸ್ ಆನ್ ವೀಲ್ಸ್ ಎಂಬ ಯೋಜನೆ ರೂಪುಗೊಂಡಿದ್ದು ಇದನ್ನು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಗ್ರಾಮೀಣ ಭಾಗದ ಜನರಲ್ಲಿನ ಕ್ಯಾನ್ಸರ್ ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಮುಂಜಾಗೃಕತೆಯಿಂದ ಕಂಡು ಹಿಡಿದು ಪ್ರಾಣ ನಷ್ಟವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ವೋಲ್ವೋ ಕಂಪನಿಯ ಕಾರ್ಪೊರೇಟ್ ಸೋಶಿಯಲ್ ರೆಸ್ಪೋನ್ಸಿಬಿಲಿಟಿ ಮತ್ತು ಎಕ್ಸ್ಟ್ರಾ ನಲ್ ಇಂಡಸ್ಟ್ರಿ ಆಫೇರ್ಸ್ನ ನಿರ್ದೇಶಕರಾದ ಜಿವಿ ರಾವ್ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಂಬಾಗದಲ್ಲಿ ಸಾರ್ವಜನಿಕರಿಗೆ ವೋಲ್ವೋ ಸಂಸ್ಥೆ, ನಾರಾಯಣ ಹೃದಯಾಲಯ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ “ವೆಲ್ನೆಸ್ ಆನ್ ವೀಲ್ಸ್” ಎಂಬ ಯೋಜನೆಯ ಮೂಲಕ ಕ್ಯಾನ್ಸರ್ ಮತ್ತು ಹೃದ್ರೋಗ ತಪಾಸಣಾ ಚಿಕಿತ್ಸೆಗೆ ಅವಶ್ಯಕತೆ ಇರುವ ಸುಸಜ್ಜಿತ ವೋಲ್ವೋ ವಾಹನ ದಲ್ಲಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮುಂದಿನ ದಿನಗಳಲ್ಲಿ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ ಪಟ್ಟಣಗಳಿಗೂ ಈ ವಾಹನ ತೆರಳಲ್ಲಿದ್ದು ಅಲ್ಲಿಯೂ ಸಹ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುವುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಸಂಜಯ್ ರವರು ಮಾತನಾಡುತ್ತಾ ಆರೋಗ್ಯ ತಪಾಸಣಾ ವೋಲ್ವೋ ವಾಹನದಲ್ಲಿ ಇಸಿಜಿ, ಎಕೋ, ಸ್ಕ್ಯಾನಿಂಗ್, ಮಮೋಗ್ರಫಿ ಲ್ಯಾಬ್ ಮುಂತಾಗಿ ಸಂಪೂರ್ಣ ಸುಸಜ್ಜಿತ ತಪಾಸಣಾ ವಾಹನ ವಾಗಿರುವುದರೊಂದಿಗೆ ನಾರಾಯಣ ಹೃದಯಾಲಯದ ಡಾ. ದೇವರಾಜ್ ರವರೊಂದಿಗೆ ೧೨ ಮಂದಿ ಸಿಬ್ಬಂದಿಯೂ ಆಗಮಿಸಿದ್ದು ಪ್ರತಿದಿನ ೧೦೦ ರಿಂದ ೧೨೦ ಮಂದಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುವುದೆಂದು ತಿಳಿಸಿದರು
ಪಟ್ಟಣದ ನಿವಾಸಿ ಮುರಳಿದರವರು ಮಾತನಾಡಿ ವಿಜಯಪುರ ಪಟ್ಟಣ ಹಾಗೂ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನಸಂಖ್ಯೆ ಸುಮಾರು ೬೦,೦೦೦ ದಾಟಿದ್ದು, ಇಂತಹ ಪರಿಸ್ಥಿತಿಯಲ್ಲಿ ಕೇವಲ ಈ ಚಿಕಿತ್ಸೆ ನೂರು ಮಂದಿಗೆ ದೊರೆತರೆ ನಿರೀಕ್ಷಿತ ಪ್ರಯೋಜನ ದೊರೆಯದೆಂದು ಕನಿಷ್ಠ ಒಂದು ವಾರ ಕಾಲವಾದರೂ ವಿಜಯಪುರ ಪಟ್ಟಣದಲ್ಲಿ ಈ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.
ಚಿಕಿತ್ಸೆಗಾಗಿ ಟೋಕನ್ ವ್ಯವಸ್ಥೆ ಏರ್ಪಡಿಸಲಾಗಿದ್ದು ಬಹಳಷ್ಟು ಮಂದಿ ಟೋಕನ್ ಸಿಗದೇ ವಾಪಸ್ ಹೋಗುತ್ತಿದ್ದುದು ಕಂಡುಬಂದಿತು.