ಮಾದಕ ವಸ್ತುಗಳ ವಿರುದ್ದ ನಿರಂತರ ಜಾಗೃತಿ ಅಗತ್ಯ
ಕಲಬುರಗಿ:ಜೂ.26:ಇಂದಿನ ಯುವ ಶಕ್ತಿ ಕಾರಣಾಂತರದಿಂದ ಮಾದಕ ವಸ್ತುಗಳ ಸೇವನೆಯ ದುಶ್ಚಟಕ್ಕೆ ಬಲಿಯಾಗುತ್ತಿರುವುದು ತುಂಬಾ ವಿಷಾದನೀಯವಾದ ಸಂಗತಿಯಾಗಿದೆ. ಇದು ಜೀವಕ್ಕೆ ಹಾನಿ ಉಂಟು ಮಾಡುವುದರ ಜೊತೆಗೆ, ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತದೆ. ಇವುಗಳ ಸೇವನೆ, ಸಾಗಣೆ, ಮಾರಾಟ ಮಾಡುವುದು ಅಪರಾಧವಾಗಿದ್ದು, ಅದರ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಬೇಕು. ನಿಷೇಧಕ್ಕೆ ಕೇವಲ ಕಾಯ್ದೆ-ಕಾನೂಗಳ ಮೂಲಕ ಮಾತ್ರ ಸಾಧ್ಯವಾಗದೆ, ಅದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸಹಯೋಗದೊಂದಿಗೆ ಬುಧವಾರ ಜರುಗಿದ ‘ಅಂತಾರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಯುವಕರು ಗಾಂಜಾ, ಭಂಗಿ, ಚರಸ ಮತ್ತು ಮದ್ಯಪಾನ ಸೇವನೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಶೂಚನೀಯವಾಗಿದೆ. ಮಾದಕ ವಸ್ತು ಸೇವನೆ ಜೀವಕ್ಕೆ ಅಪಾಯಕಾರಿಯೆಂದು ತಿಳಿದಿದ್ದರೂ ಕೂಡಾ ಆ ಚಟಕ್ಕೆ ದಾಸರಾಗುತ್ತಿರುವುದು ವಿಷಾದನೀಯವಾಗಿದೆ. ಯುವಕರಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ರೇಶ್ಮಾ ನಕ್ಕುಂದಿ, ಸಂಗಮ್ಮ ಅತನೂರ, ಜಗನಾಥ ಗುತತೇದಾರ, ಚಂದಮ್ಮ ಮರಾಠಾ, ಮಂಗಲಾ ಚಂದಾಪುರೆ, ಶ್ರೀದೇವಿ ಸಾಗರ, ಅರ್ಚನಾ ಸಿಂಗೆ, ಚಂದ್ರಕಲಾ ಮಠಪತಿ, ಗುರುರಾಜ ಕೈನೂರ್, ನಾಗೇಶ್ವರಿ ಮುಗಳಿವಾಡಿ, ನಾಗಮ್ಮ ಚಿಂಚೋಳಿ, ಸಿದ್ರಾಮ ಹೊಸಮನಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.