ಬಸ್ ಹೆಚ್ಚಳಕ್ಕೆ ಆಗ್ರಹಿಸಿ ರಸ್ತೆ ತಡೆದು ಎಬಿವಿಪಿ ಪ್ರತಿಭಟನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.27 : ವಿದ್ಯಾರ್ಥಿಗಳ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ಬಸ್ ಪಾಸ್ ವಿತರಿಸುವಂತೆ ಹಾಗೂ ಬಸ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ನಗರದ ಕೇಂದ್ರ ಬಸ್ ನಿಲ್ದಾಣ ಎದುರು ರಸ್ತೆ ತಡೆ ನಡೆಸಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.
ಅನಂತರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪಡೆಯಲು ಅತೀ ಹೆಚ್ಚು ನಗರ ಪ್ರದೇಶಗಳ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ವಿದ್ಯಾರ್ಥಿಗಳ ತರಗತಿಗಳು ಪ್ರಾರಂಭವಾದ ನಂತರ ಸರಿಯಾದ ಸಮಯಕ್ಕೆ ಬಸ್ ಪಾಸ್ ಅನ್ನು ವಿತರಣೆ ಮಾಡದೇ ಇರುವ ಕಾರಣ ಪ್ರತಿದಿನ ನೂರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಬಡ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುವುದು ಕಷ್ಟಕರವಾಗಿದೆ.
ಸರ್ಕಾರ ಶಾಲಾ ಕಾಲೇಜುಗಳು ಪ್ರಾರಂಭವಾದ ತಕ್ಷಣವೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅನ್ನು ಸಕಾಲದಲ್ಲಿ ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಸಿಬ್ಬಂದಿಗಳನ್ನು ಬಳಸಿಕೊಂಡು ಬಸ್ ಪಾಸ್ ಒದಗಿಸುವ ಅವಶ್ಯಕತೆ ಇದೆ. ಬಸ್ ಪಾಸ್ ಗೆ ಅರ್ಜಿ ಸಲ್ಲಿಸಿದ ನಂತರ ವಾರಗಳ ಕಾಲ ವಿದ್ಯಾರ್ಥಿಗಳು ಬಸ್ ಪಾಸ್ ಅನ್ನು ಪಡೆಯಲು ಕಾಯುವ ಸ್ಥಿತಿ ರಾಜ್ಯದಲ್ಲಿ ಇದೆ. ಇದರಿಂದ ಬಡ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬಸ್ ಪಾಸ್ ಸಿಗುವ ವರೆಗೂ ಬರದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ ಅವರು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿ ಬಹಳಷ್ಟು ವ್ಯತ್ಯಾಸವಿದ್ದು, ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ವಿತರಣೆ ಮಾಡುವಂತೆ ಕ್ರಮಕೈಗೊಳ್ಳಬೇಕು. ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿದ್ದರಿಂದ ಮಹಿಳೆಯರು ಬಸ್‍ಗಳಲ್ಲಿ ಹೆಚ್ಚು ಓಡಾಡುತ್ತಿರುವುದರಿಂದ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಪ್ರಯಾಣಿಕರ ಹೆಚ್ಚಳವನ್ನು ಗಣನೆಗೆ ತಗೆದುಕೊಂಡು ಬಸ್‍ಗಳ ಸಂಖ್ಯೆಯನ್ನು ಹೆಚ್ಚಳ ಮಾಡದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಬಸ್ ಗಳಲ್ಲಿ ಓಡಾಟ ಮಾಡಲು ಬಹಳ ಕಷ್ಟವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಬಸ್ಸಿನ ಬಾಗಿಲಲ್ಲಿ ನಿಂತು ಪ್ರಯಾಣವನ್ನು ಮಾಡುವುದು ಕಂಡು ಬರುತ್ತಿದೆ, ಸರಕಾರ ಬಸ್‍ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ನಿರ್ಧಾರ ಮಾಡಬೇಕು. ಯಾವ ಹಳ್ಳಿಗಳಿಗೆ ಬಸ್ ಗಳ ಕೊರತೆ ಇದೆ. ಆ ಹಳ್ಳಿಗಳಿಗೆ ಸಮರ್ಪಕವಾದ ಬಸ್ ಗಳ ವ್ಯವಸ್ಥೆಯನ್ನು ಶಾಲಾ-ಕಾಲೇಜುಗಳ ಸಮಯಕ್ಕೆ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷಾ ನಾಯಕ, ಮಲ್ಲಿಕಾರ್ಜುನ ಮಾಳಿ, ಶ್ರೀಕಾಂತ ರೆಡ್ಡಿ, ಸಂದೀಪ ಅರಳಗುಂಡಗಿ, ಕವಿತಾ ಬಿರಾದಾರ, ಐಶ್ವರ್ಯ ಆಸಂಗಿ, ಆರತಿ ನಾವಿ, ಶಿಲ್ಪಾ ಪೂಜಾರಿ, ಬಾಲಾಜಿ ಬಿರಾದಾರ, ಶಿವಾಜಿ, ಶ್ರೀಕಾಂತ, ಸ್ನೇಹಾ ಹಿರೇಮಠ, ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.