ಗ್ರಾಮಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆಗೆ ಆಗ್ರಹಹಡಗಿಲ್ ಹಾರತಿ: ಬಸ್ ತಡೆದು ವಿದ್ಯಾರ್ಥಿನಿಯರ ಪ್ರತಿಭಟನೆ
ಕಲಬುರಗಿ,ಜೂ.26-ಹಡಗಿಲ್ ಹಾರುತಿ ಗ್ರಾಮಕ್ಕೆ ಪ್ರತ್ಯೇಕ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಶಾಲಾ-ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಡಿಗಿಲ್ ಹಾರುತಿ ಗ್ರಾಮದಲ್ಲಿ ಇಂದು ಮೇಳಕುಂದಾ ಗ್ರಾಮಕ್ಕೆ ಸಂಚರಿಸುವ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ 9 ಗಂಟೆಗೆ ಗ್ರಾಮದಿಂದ ಕಲಬುರಗಿಗೆ ಸಂಚರಿಸುವ ಹಾಗೂ ಸಾಯಂಕಾಲ 4.30ಕ್ಕೆ ಸುಪರ್ ಮಾರ್ಕೆಟ್‍ದಿಂದ ಗ್ರಾಮಕ್ಕೆ ಸಂಚರಿಸುವ ರೀತಿಯಲ್ಲಿ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಿದರೆ ಕಲಬುರಗಿ ನಗರಕ್ಕೆ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಗ್ರಾಮಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಶಾಸಕರಿಗೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯಿಂದ ಮೇಳಕುಂದಾ ಮತ್ತು ಮೇಳಕುಂದಾದಿಂದ ಕಲಬುರಗಿಗೆ ಸಂಚರಿಸುವ ಬಸ್ ಪ್ರಯಾಣಿಕರಿಂದ ಕಿಕ್ಕಿರಿದು ತುಂಬುವುದರಿಂದ ಇದೇ ಬಸ್ಸಿನಲ್ಲಿ ಕಲಬುರಗಿಗೆ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಿಲ್ಲಲು ಸಹ ಜಾಗ ಸಿಗದೆ ಪರದಾಡುವಂತಾಗಿದೆ. ಕಳೆದ ಹಲವಾರು ವರ್ಷಗಳಿಂದ ಇದೇ ಸಮಸ್ಯೆಯನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ಅವರ ಶಿಕ್ಷಣ ಕುಂಠಿತವಾಗುತ್ತಿದೆ. ಈ ಸಮಸ್ಯೆ ಬಗೆ ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗಲೆಲ್ಲಾ ಸಾರಿಗೆ ಸಂಸ್ಥೆ ಅಧಿಕಾರಿಗಳು ತಾತ್ಕಾಲಿಕವಾಗಿ ಪರಿಹಾರ ಕಲ್ಪಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಗ್ರಾಮಕ್ಕೆ ಪ್ರತ್ಯೇಕ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಬೆಳಿಗ್ಗೆಯಿಂದ ಬಸ್ ತಡೆದು ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಹಡಗಿಲ್ ಹಾರುತಿ ಗ್ರಾಮದಿಂದ ಕಲಬುರಗಿಗೆ ನಿತ್ಯ ನೂರಾರು ಜನ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗುತ್ತಾರೆ. ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಇದರಿಂದ ಸಾಕಷ್ಟು ಸಮಸ್ಯೆ ಎದರಿಸುತ್ತಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮಕ್ಕೆ ಪ್ರತ್ಯೇಕ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡ ದೇವೇಂದ್ರ ಆಗ್ರಹಿಸಿದರು.