ಕುಡಿಯುವ ನೀರು ಯೋಜನೆ ಪೂರ್ಣಕ್ಕೆ ಕಾಲಮಿತಿ ಸ್ಪಷ್ಟಪಡಿಸಿ:ಬಿ.ಫೌಜಿಯಾ ತರನ್ನುಮ್
ಕಲಬುರಗಿ:ಜೂ.26: ಕಲಬುರಗಿ ಮಹಾನಗರಕ್ಕೆ 24 ಗಂಟೆ ನಿರಂತರ ಕುಡಿಯುವ ನೀರು ಒದಗಿಸುವ ಕಾಮಗಾರಿ ಪೂರ್ಣಗೊಳಿಸುವ ಕಾಲಮಿತಿಯನ್ನು ಕೂಡಲೆ ಸ್ಪಷ್ಟಪಡಿಸಬೇಕೆಂದು ಕಾಮಗಾರಿಯ ಗುತ್ತಿಗೆ ಪಡೆದ ಎಲ್ & ಟಿ ಕಂಪನಿ ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಖಡಕ್ ಸೂಚನೆ ನೀಡಿದರು.
ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಮಹಾನಗರ ಪಾಲಿಕೆ, ಕೆ.ಯು.ಐ.ಎಫ್.ಡಿ.ಸಿ ಹಾಗೂ ಎಲ್ & ಟಿ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ನಗರಕ್ಕೆ 24×7 ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿ ನಿಧಾನಗತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಈ ಕಾಮಗಾರಿ ಮುಗಿಯೋದು ಯಾವಾಗ? ಸಾರ್ವಜನಿಕರಿಗೆ ನಿತ್ಯ ನೀರು ಪೂರೈಸುವುದು ಯಾವಾಗ? ಎಂದು ಪ್ರಶ್ನಿಸಿದ ಅವರು, ಕೂಡಲೆ ಕಾಲಮಿತಿ ನಿಗದಿ ಮಾಡಿ ಗುರುವಾರ ಸಂಜೆಯೊಳಗೆ ಸ್ಪಷ್ಟವಾಗಿ ತಿಳಿಸುವಂತೆ ಸಭೆಗೆ ಚೆನ್ನೈದಿಂದ ಆಗಮಿಸಿದ ಎಲ್ & ಟಿ ಕಂಪನಿಯ ಹಿರಿಯ ಅಧಿಕಾರಿ ಸುಮದರ್ ರಾಜನ್ ಅವರಿಗೆ ಸೂಚನೆ ನೀಡಿದರು.
ಕಲಬುರಗಿ ಮಹಾನಗರದ 55 ವಾರ್ಡುಗಳಿಗೆ ಪೈಪ್‍ಲೈನ್ ಅಳವಡಿಸಿ ನೀರು ಸರಬರಾಜು ಮಾಡುವ ಸುಮಾರು 837 ಕೋಟಿ ರೂ. ವೆಚ್ಚದ ಕಾಮಗಾರಿ ಆಮೆಗತಿಯಲ್ಲಿ ಸಾಗಿಸುತ್ತಿರುವುದಕ್ಕೆ ಇತ್ತೇಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರು-ಶಾಸಕರು ಒಕ್ಕೂರಿಲಿನಿಂದ ಅಸಮಾಧಾನ ಹೊರಹಾಕಿದ್ದು, ಇದು ಹೀಗೆ ಸಾಗಿದರೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಚ್ಚರಿಕೆ ನೀಡಿದಲ್ಲದೆ ಕಾಮಗಾರಿಯ ಪ್ರಗತಿ ಕುರಿತು ಪ್ರತಿ ವಾರ ಮಾಹಿತಿ ನೀಡುವಂತೆ ಡಿ.ಸಿ. ಅವರಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಉಪ ಆಯುಕ್ತ ಮತ್ತು ಕೆ.ಯು.ಐ.ಎಫ್.ಡಿ.ಸಿ ಪ್ರಭಾರಿ ಅಧೀಕ್ಷಕ ಅಭಿಯಂತ ಆರ್.ಪಿ.ಜಾಧವ, ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರಾದ ಕೆ.ಎಸ್.ಪಾಟೀಲ, ಶಿವಕುಮಾರ, ಎಲ್ & ಟಿ ಕಂಪನಿಯ ಟೀಮ್ ಲೀಡರ್ ಕುಮಾರಸೇನ್, ಸ್ಮೆಕ್ ಕನ್ಸಲಟೆನ್ಸಿ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಪಾಲಿಕೆಯ ಇನ್ನಿತರ ಅಧಿಕಾರಿಗಳಿದ್ದರು.