ತೊಗರಿ, ಬಿಳಿ ಜೋಳ ಬೆಂಬಲ ಬೆಲೆ ಹೆಚ್ಚಿಸಲು ಧಂಗಾಪೂರ ಆಗ್ರಹ
ಕಲಬುರಗಿ,ಜೂ.26-ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದಕ್ಕೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಾ.ಸಿದ್ರಾಮಪ್ಪ ಬಿ.ಪಾಟೀಲ ಧಂಗಾಪೂರ ಅವರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ ಸಿಂಗ್ ಚೌಹಾನ್ ಅವರನ್ನು ಅಭಿನಂದಿಸಿದ್ದಾರೆ.
ಆದರೆ, ಕೇವಲ ಮೂರು ತಿಂಗಳ ಹೆಸರು ಬೆಳೆಗೆ 8682 ರೂ.ಬೆಂಬಲ ಬೆಲೆ ನಿಗದಿ ಪಡಿಸಿ ಆರು ತಿಂಗಳ ಬೆಳೆಯಾದ ತೊಗರಿಗೆ 7550 ರೂ.ನಿಗದಿ ಪಡಿಸಿರುವುದಕ್ಕೆ, ರಾಗಿ ಬೆಳೆಗೆ 444 ಬೆಂಬಲ ಬೆಲೆ ಘೋಷಣೆ ಮಾಡಿ, ಬಿಳಿ ಜೋಳಕ್ಕೆ 196 ರೂ.ಬೆಂಬಲ ಬೆಲೆ ನಿಗದಿಪಡಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರು ತಿಂಗಳ ಬೆಳೆಯಾದ ತೊಗರಿಗೆ ಕನಿಷ್ಠ 1 ಸಾವಿರ ರೂ., ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುವ ಬಿಳಿ ಜೋಳಕ್ಕೆ ಕನಿಷ್ಠ 500 ರೂ.ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಎರಡೂ ಬೆಳೆಗಳಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿ ಪಡಿಸುವುದರ ಮೂಲಕ ರೈತರು ಈ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.