ಸಂಪುಟದಿಂದ ಸಚಿವ ಜಮೀರ್ ಅಹ್ಮದ್ ಖಾನ್ ವಜಾಗೊಳಿಸಿ
ಬೀದರ್:ಜೂ.26: ಕಳೆದ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ
ಸಾಗರ್ ಈಶ್ವರ ಖಂಡ್ರೆ ಅವರು ಕೇವಲ ಮುಸ್ಲಿಮ ಮತಗಳಿಂದ ಗೆದ್ದಿದ್ದಾರೆ ಎಂದು ಹೇಳಿ ಸಮಾಜದಲ್ಲಿ ಜಾತಿ ವಿಷ ಬೀಜ ಬಿತ್ತಿದ ಹಾಗೂ ಕ್ಷೇತ್ರದ
ಮುಸ್ಲಿಮೇತರ ಮತದಾರರಿಗೆ ಅವಮಾನ ಮಾಡಿದ ವಸತಿ, ವಕ್ಪ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್
ಒತ್ತಾಯಿಸಿದ್ದಾರೆ.
ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನೀಡಿದ ಹೇಳಿಕೆ ಬೀದರ್ ಕ್ಷೇತ್ರದ ಮುಸ್ಲಿಮೇತರ ಮತದಾರರಿಗೆ ಮಾಡಿದ ದೊಡ್ಡ ಅವಮಾನ. ಸಾಗರ್ ಖಂಡ್ರೆ ಮುಸ್ಲಿಮ ಸಮಾಜದ ಮತ ಪಡೆದು ಗೆದ್ದು ಅವರು ಮುಸ್ಲಿಮರ ಸಂಸದ ಎನ್ನುವಂತೆ ಸಚಿವರು ಮಾತನಾಡಿ ಸಂವಿಧಾನದ ಜಾತ್ಯತೀತ ಮೌಲ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರಿಗೆ ಇರುವ ಮೌಲ್ಯಕ್ಕೆ ಕಪ್ಪು ಚುಕ್ಕೆ ಬಳಿದಿದ್ದಾರೆ. ಇಂಥ ಜಾತಿವಾದಿ ಸಚಿವರು ಸಂಪುಟದಲ್ಲಿ ಇರುವುದು, ತಲೆಬುಡವಿಲ್ಲದು ಹೇಳಿಕೆ ನೀಡಿ ಸಮಾಜದಲ್ಲಿ ಕೋಮುದ್ವೇಷದ ಭಾವನೆ ಕೆರಳಿಸಿ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವುದು ಸಹಿಸಲಾಗದು. ಹೀಗಾಗಿ ಕೂಡಲೇ ಇವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾರಿಗೆ ಮತ ಹಾಕುತ್ತರೆ ಎಂಬುದು ಗೌಪ್ಯ ಇರುತ್ತದೆ. ಇದು ಮತದಾರರಿಗೆ ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಬಹು ದೊಡ್ಡ ಹಕ್ಕಾಗಿದೆ. ಇದ್ಯಾವುದರ ಪರಿವು, ಕನಿಷ್ಟ ಜ್ಞಾನ ಇಲ್ಲದ ಸಚಿವ ಜಮೀರ್ ಅವರು, ಸಾಗರ್ ಖಂಡ್ರೆ ಮುಸ್ಲಿಮರ ಮತಗಳಿಂದಲೇ ಗೆದ್ದಿದ್ದಾರೆ ಎಂದು ಹೇಳಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರಶ್ನಿಸಿದ್ದಾರೆ. ಜಮೀರ್ ಅವರು ಸಮಾಜದಲ್ಲಿ ಗೊಂದಲ ಸೃಷ್ಟಿಸಿದ ಹೇಳಿಕೆ ನೀಡಿದ್ದಕ್ಕಾಗಿ ಸಮಾಜಕ್ಕೆ, ಬೀದರ್ ಲೋಕಸಭಾ ಕ್ಷೇತ್ರದ ಮಹಾಜನತೆಗೆ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.
ಜಮೀರ್ ಅಹ್ಮದ್ ಅವರು ನೀಡಿದ ಹೇಳಿಕೆ ಬೀದರ್ ಲೋಕಸಭಾ ಕ್ಷೇತ್ರದ ಮುಸ್ಲಿಮೇತರ ಎಲ್ಲ ಸಮಾಜದ ಮತದಾರರಿಗೆ ಅವಮಾನಿಸಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಅವರ ಪುತ್ರರಾದ ಸಂಸದ ಸಾಗರ್ ಖಂಡ್ರೆ ಅವರು ಸಹ ಸ್ಪಷ್ಟನೆ ನೀಡಬೇಕು. ನಿಮ್ಮ ಸರ್ಕಾರ, ಕಾಂಗ್ರೆಸ್ ಪಕ್ಷದ ನೀತಿ- ನಿಲುವುಗಳು ಕೇವಲ ಮುಸ್ಲಿಮರಿಗೆ ಸೀಮಿತವಾಗಿ ಇವೆಯೇ? ನೀವು ಮುಸ್ಲಿಮ ಮತಗಳಿಂದಲೇ ಗೆದ್ದಿದ್ದು, ಉಳಿದ ಸಮಾಜ ಬೇಕಿಲ್ಲವೆ? ನಿಮ್ಮ ಸಂಪುಟದ ಸಹೋದ್ಯೋಗಿ ಕ್ಷೇತ್ರದ ಜನರಿಗೆ ಈ ರೀತಿ ಅವಮಾನ ಮಾಡಿದರೂ ಏಕೆ ಸುಮ್ಮನಿದ್ದಿರಿ ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಜನರಲ್ಲಿ ಮೂಡುತ್ತಿವೆ. ಈ ಕುರಿತು ಅಪ್ಪ, ಮಗ ಜನರಿಗೆ ಉತ್ತರ ನೀಡಲಿ ಎಂದು ಸೋಮನಾಥ ಪಾಟೀಲ್ ಸವಾಲು ಹಾಕಿದ್ದಾರೆ.