ಜು. 09 ರಿಂದ ಜಿಲ್ಲೆಯಾದ್ಯಂತ ಕರ್ನಾಟಕ ಜ್ಯೋತಿ ರಥಯಾತ್ರೆ ಸಂಚಾರ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೨೬; ಕರ್ನಾಟಕ ಸಂಭ್ರಮ-50ರ ಅಂಗವಾಗಿ ಕರ್ನಾಟಕ ಜ್ಯೋತಿ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಜುಲೈ 09ರಂದು ಚಿತ್ರದುರ್ಗ ಜಿಲ್ಲೆಗೆ ಆಗಮಿಸಲಿದೆ.  ಜುಲೈ 9 ರಿಂದ 14 ರವರೆಗೆ ಜಿಲ್ಲೆಯಾದ್ಯಂತ “ಕರ್ನಾಟಕ ಜ್ಯೋತಿ ರಥಯಾತ್ರೆ” ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಜ್ಯೋತಿ ರಥಯಾತ್ರೆಯನ್ನು ಗೌರವದಿಂದ ಬರ ಮಾಡಿಕೊಳ್ಳಲು ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಆರು ತಾಲ್ಲೂಕುಗಳನ್ನು ಒಳಗೊಂಡಂತೆ ಕರ್ನಾಟಕ ಜ್ಯೋತಿ ರಥಯಾತ್ರೆಯು ಜಿಲ್ಲೆಯಾದ್ಯಂತ ಜುಲೈ 09 ರಿಂದ 14 ರವರೆಗೆ ಸಂಚಾರ ನಡೆಯಲಿದ್ದು, ಸಂಬಂಧಪಟ್ಟ ಆಯಾ ತಾಲ್ಲೂಕಿನ ತಹಶೀಲ್ದಾರ್‍ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಸಮನ್ವಯತೆಯೊಂದಿಗೆ ಕರ್ನಾಟಕ ಜ್ಯೋತಿ ರಥಯಾತ್ರೆಗೆ ಸಂಭ್ರಮದ ಸ್ವಾಗತ ಸಂಚಾರಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಸುವರ್ಣ ಸಂಭ್ರಮ-50ರ ಅಂಗವಾಗಿ ಕರ್ನಾಟಕ ಜ್ಯೋತಿ ರಥಯಾತ್ರೆಯು ಚಿತ್ರದುರ್ಗ ಜಿಲ್ಲೆಗೆ ಆಗಮಿಸಲಿದ್ದು, ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲಕ ಜುಲೈ 9ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿಗೆ ಆಗಮಿಸಲಿದ್ದು, ರಥಯಾತ್ರೆಯನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾಗುವುದು. ಜುಲೈ 10ರಂದು ಚಿತ್ರದುರ್ಗ, ಜುಲೈ 11ರಂದು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ, ಜುಲೈ 12ರಂದು ಚಳ್ಳಕೆರೆ, ಜುಲೈ 13ರಂದು ಹಿರಿಯೂರು, ಜುಲೈ 14ರಂದು ಹೊಸದುರ್ಗ ತಾಲ್ಲೂಕಿನಲ್ಲಿ ರಥಯಾತ್ರೆ ಸಂಚರಿಸಿ ನಂತರ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಗೆ ತೆರಳಲಿದೆ ಎಂದು ಮಾಹಿತಿ ನೀಡಿದರು.