ಜು.21ರಂದು ಅ.ಭಾ.ವೀ.ಲಿಂ.ಮಹಾಸಭಾ ಚುನಾವಣೆಶರಣು ಮೋದಿ ಮುಂದುವರಿಕೆಗೆ ಆಗ್ರಹ
ಕಲಬುರಗಿ:ಜೂ.26: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಚುನಾವಣೆ ಜುಲೈ 21ರಂದು ನಡೆಯಲಿದ್ದು, ಸಮುದಾಯದ ಪರವಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಮಹಾಸಭಾ ಹಾಲಿ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ಅವರನ್ನೇ ಜಿಲ್ಲಾಧ್ಯಕ್ಷರನ್ನಾಗಿ ಮುಂದುವರೆಸಬೇಕೆಂದು ಸಮಾಜದ ಮುಖಂಡ ಹಾಗೂ ನ್ಯಾಯವಾದಿ ರಮೇಶ್ ಕಡಾಳೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿರುವ ಅವರು, ವೀರಶೈವ ಲಿಂಗಾಯತ ಸಮುದಾಯದ ಬಾಲಕಿಯರ ಶಿಕ್ಷಣ ಮತ್ತು ಸ್ವಾಭಿಮಾನಿ ಬದುಕಿಗೆ ಒತ್ತು ನೀಡುವ ಸದುದ್ದೇಶದಿಂದ ಮೋದಿ ಅವರು ಕಲಬುರಗಿ ನಗರದ ಧರಿಯಾಪುರ ಕೋಟನೂರ್ (ಜಿಡಿಎ) ಬಡಾವಣೆಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಸೇರಿದಂತೆ ಪಕ್ಷಾತೀತವಾಗಿ ಹಿರಿಯ ಮುಖಂಡರ ಮಾರ್ಗದರ್ಶನದೊಂದಿಗೆ ಬೃಹತ್ ವಸತಿ ನಿಲಯ ನಿರ್ಮಿಸಿದ್ದಾರೆ. ಈ ವಸತಿ ನಿಲಯದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕೆಲವು ದಿನಗಳು ಬೇಕಾಗುತ್ತವೆ. ಈ ಹಿನ್ನೆಲೆಯಲ್ಲಿ ಮೋದಿ ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದರಿಂದ ಹಾಸ್ಟೆಲ್ ಕಾಮಗಾರಿ ಅಬಾಧಿತವಾಗಿ ಮುಂದುವರೆಯಲಿದೆ ಎಂದಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಂದ ಹಿಡಿದು ಮಹಾಸಭಾ ಸದಸ್ಯತ್ವ ಹೆಚ್ಚು ಮಾಡುವಲ್ಲಿಯೂ ಶರಣು ಮೋದಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಮೇಲಾಗಿ, ರಾಜ್ಯ ಸರಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರಿಂದ ಮಹಾಸಭಾ ಹಾಗೂ ಸಮುದಾಯಕ್ಕೆ ಮತ್ತಷ್ಟು ಪ್ರಯೋಜನಗಳು ಲಭಿಸಲಿವೆ. ಈ ಎಲ್ಲ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೋದಿ ಅವರನ್ನೇ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಬೇಕೆಂದು ಕಡಾಳೆ ಮನವಿ ಮಾಡಿದ್ದಾರೆ.