ಯೋಗದಿಂದ ಶಾಂತಿ, ನೆಮ್ಮದಿ ಸಿಗಲು ಸಾಧ್ಯ: ಮಹಾದೇವ ಜಮ್ಮು
ಬಸವಕಲ್ಯಾಣ: ಜೂ.26:ಮನುಷ್ಯನ ಇಂದಿನ ಧಾವಂತ ಬದುಕಿಗೆ ಯೋಗ ಕಡಿವಾಣ ಹಾಕಿ ಅವನಲ್ಲಿ ಶಾಂತಿ-ನೆಮ್ಮದಿಯನ್ನು ಹುಟ್ಟಿ ಹಾಕುತ್ತದೆ. ಮನುಷ್ಯನ ದೇಹ, ಆತ್ಮ ಹಾಗೂ ಮನಸ್ಸನ್ನು ಒಂದೆಡೆ ಏಕಾಗ್ರತೆಗೊಳಿಸಿ ಸದಾ ಅವನನ್ನು ಆರೋಗ್ಯವಾಗಿಡುವ ಶಕ್ತಿ ಯೋಗದಲ್ಲಿದೆ ಎಂದು ಹುಲಸೂರ ತಾಪಂ ಸಹಾಯಕ ನಿರ್ದೇಶಕ ಮಹಾದೇವ ಜಮ್ಮು ಹೇಳಿದರು.
ತಾಲೂಕಿನ ಮಿರಖಲ್ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಅಮೃತ್ ಸರೋವರ ಕೆರೆ ಪಕ್ಕ ಶುಕ್ರವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಯೋಗ ಇರುವುದರಿಂದ ಇಂದು ಜಗತ್ತಿನಲ್ಲಿರುವ ಎಲ್ಲ ರಾಷ್ಟ್ರಗಳು ನಮ್ಮತ್ತ ಅತ್ಯಂತ ಗೌರವದಿಂದ ನೋಡುತ್ತಿವೆ. ಯೋಗದ ವಿಷಯದಲ್ಲಿ ಭಾರತ ಇತರೆ ದೇಶಗಳಿಗೆ ಮಾದರಿ ಎಂದರು.
ಗ್ರಾಪಂ ಅಧ್ಯಕ್ಷೆ ಸುವರ್ಣಾ ಮೇತ್ರೆ ಮಾತನಾಡಿ, ಮನಸ್ಸು ಆರೋಗ್ಯಕರವಾಗಿರಬೇಕಾದರೆ ನಾವು ದಿನನಿತ್ಯ ಯೋಗವನ್ನು ಕಡ್ಡಾಯವಾಗಿ ಮಾಡಬೇಕು. ದೇಹವನ್ನು ದಂಡಿಸಬೇಕು. ಯೋಗ ಮನುಷ್ಯನ ಅವಿಭಾಜ್ಯ ಅಂಗವೆಂದು ತಿಳಿದು ನಾವು ಯೋಗವನ್ನು ನಮ್ಮ ದೈನಂದಿನ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಪಿಡಿಒ ರಮೇಶ ಮಿಲಿಂದಕರ್ ಮಾತನಾಡಿದರು. ತಾಪಂ ಐಇಸಿ ಸಂಯೋಜಕ ಗಣಪತಿ ಹರಕೂಡೆ, ಗ್ರಾಪಂ ಸದಸ್ಯರಾದ ಸತೀಶ ಪಾಟೀಲ್, ನಾಗೇಶ ಮದ್ನೆ, ಶಾಲಾ ಮುಖ್ಯೋಪಾಧ್ಯಾಯ ಪ್ರತಾಪ್ ಸಿಂಗ್ ಜಾಧವ, ದೈಹಿಕ ಶಿಕ್ಷಕ ರಾಜಶೇಖರ್ ಹೊಸಮನಿ, ಜಗನ್ನಾಥ ಪಾಟೀಲ್, ಮಲ್ಹಾರಿ ಪಾಂಡೆ, ಬಾಲಾಜಿ ಶಿಂಧೆ, ಮಾಧವ ಸೋಮವಂಶಿ, ಗ್ರಾಪಂ ಕಾರ್ಯದರ್ಶಿ ಮೋಹನಕುಮಾರ, ಅನಿತಾ, ಲಕ್ಷ್ಮಿ, ದೀಪಮಾಲಾ, ಗ್ರಾಪಂ ಸಿಬ್ಬಂದಿ, ಶಾಲಾ ಮಕ್ಕಳು, ನರೇಗಾ ಮಹಿಳಾ ಕೂಲಿ ಕಾರ್ಮಿಕರು, ಕಾಯಕ ಬಂಧುಗಳು ಹಾಗೂ ಸಾರ್ವಜನಿಕರು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.