ಶಿವಮೊಗ್ಗ : ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳ ಅನುಷ್ಠಾನದತ್ತ ಹರಿಯುವುದೆ ಜಿಲ್ಲಾ ಉಸ್ತುವಾರಿ ಸಚಿವರ ಚಿತ್ತ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜೂ. 25: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷವಾಗಿದೆ. ಆದರೆ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ, ಶಿವಮೊಗ್ಗ ಜಿಲ್ಲೆಯ ಪ್ರಮುಖ ಆಡಳಿತಾತ್ಮಕ ವಿಷಯಗಳಿಗೆ ಆದ್ಯತೆ ದೊರಕಿಲ್ಲ!ಎಂಪಿಎಂ : ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಪುನಾರಾರಂಭಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಕ್ರಮವಾಗಬೇಕಾಗಿದೆ. ಭದ್ರಾವತಿ ಸರ್ಕಾರಿ ಐಟಿಐ ಕಾಲೇಜ್ ನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಆರಂಭಿಸುವ ಮೂಲಕ, ಬಡ –ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ.ತಾಲೂಕು ಕೇಂದ್ರಗಳು : ಶಿವಮೊಗ್ಗ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಹೊಸ ತಾಲೂಕು ಕೇಂದ್ರಗಳ ರಚನೆಯಾಗಿಲ್ಲ. ಶಿವಮೊಗ್ಗ ನಗರ – ಗ್ರಾಮೀಣ ತಾಲೂಕು, ಭದ್ರಾವತಿಯಲ್ಲಿ ಹೊಳೆಹೊನ್ನೂರು ತಾಲೂಕು, ಸೊರಬದಲ್ಲಿ ಆನವಟ್ಟ ಹಾಗೂ ಶಿಕಾರಿಪುರದಲ್ಲಿ ಶಿರಾಳಕೊಪ್ಪ ತಾಲೂಕು ಕೇಂದ್ರ ರಚನೆಯ ಬೇಡಿಕೆಯಿದೆ.ಪಾಲಿಕೆ ವ್ಯಾಪ್ತಿ ವಿಸ್ತರಣೆ : ಕಳೆದ 25 ವರ್ಷಗಳಿಂದ ಶಿವಮೊಗ್ಗ ನಗರ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ. ಜನಸಂಖ್ಯೆ, ನಗರ ಬೆಳವಣಿಗೆಗೆ ಅನುಗುಣವಾಗಿ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯಾಗಬೇಕಾಗಿದೆ.  ವಾರ್ಡ್ ಗಳ ಸಂಖ್ಯೆ ಹೆಚ್ಚಳವಾಗಬೇಕಾಗಿದೆ.ಪೊಲೀಸ್ ಕಮೀಷನರೇಟ್ : ರಾಜ್ಯದಲ್ಲಿ ಅತೀ ಹೆಚ್ಚು ಅಪರಾಧ ಕೃತ್ಯಗಳು ವರದಿಯಾಗುವ ನಗರಗಳಲ್ಲೊಂದಾದ ಹಾಗೂ ಕೋಮು ಸೂಕ್ಷ್ಮವಾಗಿರುವ  ಶಿವಮೊಗ್ಗದಲ್ಲಿ ಪೊಲೀಸ್ ಬಲ ಹೆಚ್ಚಳವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ – ಭದ್ರಾವತಿ ನಗರ ಒಳಗೊಂಡಂತೆ, ಪೊಲೀಸ್ ಕಮೀಷನರೇಟ್ ಸ್ಥಾಪನೆಯಾಗಬೇಕಾಗಿದೆ. ಹಾಗೆಯೇ ಜಿಲ್ಲೆಯ ವಿವಿಧೆಡೆ ಹೊಸ ಪೊಲೀಸ್ ಠಾಣೆಗಳ ಬೇಡಿಕೆಯಿದೆ.ಸರ್ಕಾರಿ ಸಿಟಿ ಬಸ್ : ಶಿವಮೊಗ್ಗ, ಭದ್ರಾವತಿ ನಗರಗಳಲ್ಲಿ ಈ ಹಿಂದೆ ಸಂಚರಿಸುತ್ತಿದ್ದ ಜೆನ್ ನರ್ಮ್ ಯೋಜನೆಯ ಸರ್ಕಾರಿ ಸಿಟಿ ಬಸ್ ಗಳು ಸಮರ್ಪಕವಾಗಿ ಸಂಚರಿಸುತ್ತಿಲ್ಲ. ಪ್ರತ್ಯೇಕ ಸರ್ಕಾರಿ ಸಿಟಿ ಬಸ್ ಡಿಪೋ, ಸಿಟಿ ಬಸ್ ಸ್ಟ್ಯಾಂಡ್ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿಲ ಆದ್ಯ ಗಮನಹರಿಸಬೇಕಾಗಿದೆ.