ಆಳಂದನಲ್ಲಿ 13ಕ್ಕೆ ವಿಶೇಷ ಲೋಕ ಅದಾಲತ್ಲೋಕ ಅದಲಾತ್ ಸದ್ಬಳಕೆಗೆ ನ್ಯಾಯಾಧೀಶ ಅರುಟಗಿ ಸಲಹೆ
ಆಳಂದ:ಜೂ.26: ಕೋರ್ಟ್‍ನಲ್ಲಿ ರಾಜೀಯಾಗಬಲ್ಲ ಪ್ರಕರಣಗಳನ್ನು ವಿಶೇಷ ಲೋಕ ಅದಾಲತನಲ್ಲಿ ರಾಜೀಸಂದಾನ ಮೂಲಕ ಇತ್ಯರ್ಥಪಡಿಸಲು ಸಂಬಂಧಿತ ಅಧಿಕಾರಿಗಳು ಮತ್ತು ನ್ಯಾಯಾವಾದಿಗಳು ಮುಂದಾಗಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಎಸ್.ಎಂ. ಅರುಟಗಿ ಅವರು ಸಲಹೆ ನೀಡಿದರು.
ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಜುಲೈ 13ರಂದು ವಿಶೇಷ ಲೋಕ ಅದಾಲತ್ ನಡೆಸುವ ಕುರಿತಾಗಿ ಮಂಗಳವಾರ ಕರೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಹಾಜರಿದ್ದ ನ್ಯಾಯವಾದಿಗಳು ಮತ್ತು ಅಧಿಕಾರಿಗಳ ಉದ್ದೇಶಿಸಿ ಅವರು ಮಾತನಾಡಿದರು.
ಬಹುದಿನಗಳಿಂದಲೂ ಕೋರ್ಟ್‍ನಲ್ಲಿರುವ ಪ್ರಕರಣಗಳು ಕಕ್ಷಿದಾರರಿಗೆ ತಿಳಿವಳಿಕೆ ಮೂಲಕ ರಾಜೀಸಂದಾನ ಕೈಗೊಂಡ ಪ್ರಕರಣ ಇತ್ಯರ್ಥಪಡಿಸಿದರೆ ಕಕ್ಷಿದಾರರಿಗೆ ವ್ಯರ್ಥ ಸಮಯ ಹಾಗೂ ಹಣ ಖರ್ಚಾಗುವುದು ತಪ್ಪಿ ಮಾನಸಿಕ ನೆಮ್ಮದಿಯಿಂದ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದಕು ಸಾಧ್ಯವಾಗುತ್ತದೆ. ಇದನ್ನು ಕೈಗೊಳ್ಳಲು ಸರ್ವರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜುಲೈ 13ರಂದು ನಡೆಯುವ ವಿಶೇಷ ಲೋಕ ಅದಾಲತನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಉದ್ದೇಶ ಹೊಂದಲಾಗಿದೆ. ಕ್ಷುಲಕ್ಕ ಕಾರಣಗಳಿಂದಾಗಿ ಕೋರ್ಟ್ ಕಟ್ಟೆ ಹತ್ತಿರುವ ಪ್ರಕರಣಗಳನ್ನು ಮತ್ತು ರಾಜೀಯಾಗುವ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವ ಕಕ್ಷಿದಾರರಿಗೆ ಸಹಕರಿಸಿ ಪ್ರಕರಣಗಳಿಗೆ ತಾರ್ಕಿಕ ಅಂತ್ಯಕಂಡುಕೊಳ್ಳಬೇಕು ಎಂದು ಅವರು ಹೇಳಿದರು.
ಕಿರಿಯ ಶ್ರೇಣಿ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ, ಹೆಚ್ಚುವರಿ ನ್ಯಾಯಾಧೀಶೆ ಸುಮ್ಮನ ಚಿತರಗಿ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಸಿಪಿಐ ಮಹಾದೇವ ಪಂಚಮುಖಿ ಅವರು ಸಭೆಯಲ್ಲಿ ಚರ್ಚಿಸಿದರು.
ಈ ವೇಳೆ ನ್ಯಾಯವಾದಿ ಎಂ.ಕೆ.ಗೋವಿನ ಅವರು ಕೋರ್ಟ್ ಆದೇಶಗಳಿಗೆ ಕಂದಾಯ ಇಲಾಖೆಯಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು. ಈ ಕುರಿತು ಗಮನ ಹರಿಸುವಂತೆ ತಹಸೀಲ್ದಾರರಿಗೆ ನ್ಯಾಯಾಧೀಶರು ಸೂಚನೆ ನೀಡಿದರು.
ಸರ್ಕಾರಿ ವಕೀಲ ಇಸ್ಮಾಯಿಲ್ ಪಟೇಲ್, ಜ್ಯೋತಿ ವಿ. ಬಂದಿ, ನ್ಯಾಯವಾದಿ ಸಂಘದ ಕಾರ್ಯದರ್ಶಿ ಬಿ.ಟಿ.ಸಿಂಧೆ, ಹಿರಿಯ ನ್ಯಾಯವಾದಿ ಎಸ್.ಎ. ಪಾಟೀಲ, ಡಿ.ಎಸ್.ನಾಡಕರ್, ಮಹಾದೇವ ಹತ್ತಿ, ದೇವಾನಂದ ಹೋದಲೂರಕ್, ಶಿವಶಂಕರ ಮುನೋಳ್ಳಿ, ಬಿ.ಜಿ.ಬೀಳಗಿ, ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ ಸೇರಿ ಇನ್ನಿತರ ಹಿರಿಯ ಕಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು.