ಸೋತು ಹೋದ ಸಂವಿಧಾನದ ವಾರಸುದಾರರಾಗಿದ್ದೇವೆ ನಾವೆಲ್ಲ:ಸುಧಾಕರ್ ಹೊಸಳ್ಳಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.26: ಇಂದಿರಾಗಾಂಧಿ ಅವರು 1975 ರಲ್ಲಿ ತುರ್ತು ಪರಿಸ್ಥಿತಿ ತಂದಿದ್ದು. ದೇಶದಲ್ಲಿ ಯಾವುದೇ ಆಂತರಿಕ ಕ್ಷೋಭೆ ಇರಲಿಲ್ಲ. ಸಂವಿಧಾನದ ನಿಯಮಗಳನ್ನು ಮೀರಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಹಾಗಾಗಿ ನಾವೆಲ್ಲ ಸೋತು ಹೋದ ಸಂವಿಧಾನದ ವಾರಸುದಾರರಾಗಿದ್ದೇವೆ ನಾವೆಲ್ಲ ಎಂದು ಮೈಸೂರಿನ ಡಾ.ಸುಧಾಕರ ಹೊಸಳ್ಳಿ ಅಭಿಪ್ರಾಯಪಟ್ಟರು.
ಅವರು ನಿನ್ನೆ ಸಂಜೆ ನಗರದ ಬಾಲಭಾರತಿ ಶಾಲೆಯ ಆವರಣದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರಿಂದ ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಎಂಬ ಸಂವಾದ ಕಾರ್ಯಕ್ರಮದಲ್ಲಿ 
ಸಂವಿಧಾನ ಮತ್ತು ತುರ್ತು ಪರಿಸ್ಥಿತಿ ಕುರಿತು ಮಾತನಾಡುತ್ತಿದ್ದರು.
ತುರ್ತು ಪರಿಸ್ಥಿತಿ ವಿಧಿಸುವ ಕುರಿತು ಸಂವಿಧಾನದಲ್ಲಿಯೇ ಇದೆ. ಆದರೆ  ಲೋಕಸಭಾ ಚುನಾವಣೆಯಲ್ಲಿ ಸೋತ  ಇಂದಿರಾ ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿ ತಂದರು. ಇದರಿಂದ ದೇಶದ  ನ್ಯಾಯಾಂಗ ವ್ಯವಸ್ಥೆಯನ್ನೇ ನೆಲಕ್ಕುರಳಿಸಿದರೆಂದರು.
ಅಂಬೇಡ್ಕರ್ ವಿರೋಧದ ನಡುವೆಯೇ 49 ತಿದ್ದುಪಡಿಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಯ್ತು. ಆದರೆ ಅದು 1975 ರಲ್ಲಿ ತುರ್ತು ಪರಿಸ್ಥಿತಿ ಮೂಲಕ ಸೋತಿತು.  ಇಂದಿರಾ ಅವರು ಸಚಿವ ಸಂಪುಟದ ಸದಸ್ಯರಿಗೂ ತಿಳಿಯದೇ ಜಾರಿ ಮಾಡಿದ್ದರು. ಸಂವಿಧಾನದ ವಿರುದ್ದವಾಗಿ ಹೋರಾಟಗಾರರನ್ನು ಬಂಧಿಸಿದ್ದಲ್ಲ, ಅವರು ಬಂಧಿಸಿದ್ದು ಸಂವಿಧಾನವನ್ನು ಎಂದರು. ಇಂತಹ ಪರಿಸ್ಥಿತಿ ಮತ್ತೊಮ್ಮೆ ಬರಬಾರದೆಂಬ ಆಶಯ ತುರ್ತು ಪರಿಸ್ಥಿತಿಯ 50 ವರ್ಷಗಳ ನಂತರ ಚಿಂತಿಸಬೇಕಿದೆಂದರು.
ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ, ಸ್ವತಃ ಅಂಬೇಡ್ಕರ್ ಬಂದರೂ ಬದಲಾವಣೆ ಆಗಲ್ಲ.  ಈ ಹಿಂದೆ ನಡೆದಿರುವಂತೆ ತಿದ್ದುಪಡಿಯಷ್ಟೇ ಮಾಡಬಹುದು. ಸಂವಿಧಾನದ 42 ನೇ ತಿದ್ದುಪಡಿ ಮಾಡಿದ್ದು  ಅಂಬೇಡ್ಕರ್ ಅವರು ನೀಡಿದ 59 ವಿಧಿಗಳನ್ನು ತಿದ್ದಲಾಗಿದೆ. ಅದು ಆಗಿದ್ದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ. ಇದನ್ನು ಬೇಕಾದರೆ ಸಂವಿಧಾನದ ಬದಲಾವಣೆ ಎನ್ನಬಹುದಲ್ಲವೇ, ತುರ್ತು ಪರಿಸ್ಥಿತಿಯಲ್ಲಿ  ಇಡೀ ಸಂವಿಧಾನವೇ ಇಲ್ಲದಂತೆ ಆಡಳಿತ ಮಾಡಿದ್ದು. 
20, 21 ನೇ ಕಾಯ್ದೆ ಯಾವುದೇ ಕಾರಣಕ್ಕೆ ತಿದ್ದುಪಡಿಯಾಗಬಾರದು ಎಂದರು.
ಸಂವಿಧಾನದ 370 ರದ್ದು ಮಾಡಿದ್ದು ಸರ್ವಜನ ಸುಖಿನೋ ಭವಂತು ಎಂಬಂತೆ ಬಾಬಾ ಸಾಹೇಬ್ ಆಶಯದಂತೆ ಎಲ್ಲರಿಗೂ  ಸಮಾನ ಅವಕಾಶ ಕಲ್ಪಿಸಿದ್ದಾಗಿದೆ. ಮೋದಿ ಮತ್ತು ಅಮಿತ್ ಷಾ ಅವರ ಆಶಯಕ್ಕಲ್ಲಾ ಎಂದರು.
ನಂತರ ಸಭಿಕರಾದ, ಜಗದೀಶ, ನಾಗನಗೌಡ ಮೊದಲಾದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ರಾಜ್ಯಗಳಿಗೆ ತುರ್ತುಪರಿಸ್ಥಿತಿ ಹೇರಿಕೆ ಅಧಿಕಾರವಿಲ್ಲ, ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳನ್ನು ಮಾಡಿಕೊಳ್ಳಲು ಇದೆ. ಇನ್ನಿತರರ ಮೇಲೆ ದೌರ್ಜ್ಯನ ಮಾಡಲು ಅಲ್ಲ ಎಂದರು.
ಕಾರ್ಯಕ್ರಮ ಹಂಪಿಯ ಮಾತಂಗ ಮಠದ  ಪೂರ್ಣಾನಂದ ಭಾರತಿ ಶ್ರೀಗಳ ಸಮ್ಮುಖದಲ್ಲಿ ನಡೆಯಿತು.
ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಭಾಗವಹಿಸಿದ್ದರು.
ಅರುಣಾಚಲಂ ಅತಿಥಿಗಳನ್ನು ಸ್ವಾಗತಿಸಿದರು. ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಅಪರ್ಣ ಪ್ರಾರ್ಥನೆ ನೆರವೇರಿಸಿದರು. ನಗರದ ಪ್ರಮುಖ ನಾಗರೀಕರು, ಗಣ್ಯರು ಪಾಲ್ಗೊಂಡಿದ್ದರು.