ಮಾದಕ ದ್ರವ್ಯಗಳ ದಾಸರಾಗಬೇಡಿ
ಬಾಗಲಕೋಟೆ,ಜೂ.26: ಮಾದಕ ವಸ್ತುಗಳ ಸೇವನೆಯಿಂದ ದೇಹದ ಮೇಲೆ ಆಗುವ ಹಲವು ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಗಂಭೀರವಾಗಿ ಯೋಚಿಸಿ ಅವುಗಳಿಂದ ದೂರವಿರಬೇಕು ಎಂದು ಅಪರಾಧ ವಿಭಾಗದ ಪಿಎಸ್‍ಐ ಶ್ರೀಮತಿ ಜೆ.ವಾಯ್.ನದಾಫ್ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಬಾಗಲಕೋಟ ಶಹರ ಪೊಲೀಸ್ ಠಾಣೆ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಾದಕ ವಸ್ತು ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧ’ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವ್ಯಸನಿಗಳು ಮನಸ್ಸು ಹಾಗೂ ದೇಹದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಕ್ರಮೇಣ ಅಡ್ಡದಾರಿ ಹಿಡಿಯುತ್ತಾರೆ.ಕುಟುಂಬದ ಸದಸ್ಯರು ಮುಜುಗರಪಡುವಂತಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳಿಂದ ಉತ್ತಮ ಆರೋಗ್ಯವನ್ನು ಬೆಳೆಸಿಕೊಂಡು ಉತ್ತಮ ಪ್ರಜೆಯಾಗಿ ಯಶ ಪಡೆಯಬಹುದು ಎಂದರು.
ಪಿಸಿ ಕಾವ್ಯ ಅನಂತಪುರ ಮಾತನಾಡಿ ಯುವಕರು ವ್ಯಸನಗಳಿಂದ ದೂರವಿರಬೇಕು.ಒಳ್ಳೆಯ ಸ್ನೇಹಿತರನ್ನು ಹೊಂದಿ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು.ಆ ಮೂಲಕ ಪಾಲಕರ ಕನಸನ್ನು ಸಾಕಾರಗೊಳಿಸಬೇಕು ಎಂದರು.
ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ ಉತ್ತಮ ಆರೋಗ್ಯವಿದ್ದಾಗ ಮಾತ್ರ ಸಾಧನೆ ಸಾಧ್ಯ ಎಂಬ ಅಂಶವನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ಮಾದಕ ವಸ್ತುಗಳಿಂದ ದೂರವಿರಬೇಕು. ಈ ಪಿಡುಗಿನಿಂದ ಹೊರಬರಲು ಈ ದಿನ ಎಚ್ಚರಿಕೆ ನೀಡಿ ಹೊಸ ದಾರಿಯನ್ನು ತೋರಿಸುತ್ತದೆ ಮತ್ತು ನಿರ್ಮೂಲನೆ ಮಾಡಲು ಪ್ರೇರೇಪಿಸುತ್ತದೆ ಎಂದರು. ಈ ದುಷ್ಪರಿಣಾಮಗಳ ಬಗ್ಗೆ ಶಿಕ್ಷಣ ನೀಡಬೇಕು.ಅರಿವು ಮತ್ತು ಜಾಗೃತಿ ಮೂಡಿಸಬೇಕು. ಆ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದರು.
ದಿವ್ಯಶ್ರೀ ಬಿಲ್ಲಾರ ಪ್ರಾರ್ಥಿಸಿದರು. ಐಕ್ಯೂಎಸಿ ಸಂಯೋಜಕ ಎಚ್.ಎಸ್.ಗಿಡಗಂಟಿ ಸ್ವಾಗತಿಸಿದರು.ಉಪನ್ಯಾಸಕಿ ಸವಿತಾ ಜೇವೂರ ನಿರೂಪಿಸಿದರು. ಡಾ.ಎಸ್.ಎಸ್.ಹಂಗರಗಿ ವಂದಿಸಿದರು.
ಪಿಎಸ್‍ಐ ಡಿ.ಕೆ.ಯಳ್ಳಿಗುತ್ತಿ,ಹೆಚ್ಚುವರಿ ಪಿಎಸ್‍ಐ ಐ.ಆರ್.ಮಾದರ ಹಾಗೂ ಎಸ್.ಜಿ.ಸೊನ್ನದ ಇದ್ದರು.