ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯಗಳ ಕುರಿತು ಅರಿವು ಮೂಡಿಸಿ
ಗದಗ ಜೂ.26:ಸರ್ಕಾರದಿಂದ ಸಫಾಯಿ ಕರ್ಮಚಾರಿಗಳಿಗೆ ಸಿಗುವ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು. ಅವರಿಗೆ ಒದಗಿಸುವ ಪರಿಕರಗಳನ್ನು ಸಮರ್ಪಕವಾಗಿ ಬಳಸುವ ಕುರಿತು ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಫಾಯಿ ಕರ್ಮಚಾರಿಗಳ ಸೌಲಭ್ಯದ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಫಾಯಿ ಕರ್ಮಚಾರಿಗಳಿಗೆ ವರ್ಷದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಕೈಗೊಳ್ಳಲು ಕ್ರಮ ವಹಿಸಬೇಕು. ಸಫಾಯಿ ಕರ್ಮಚಾರಿಗಳ ಸುರಕ್ಷಿತ ಪರಿಕರ ವಿತರಣೆಯ ನಂತರ ಅವುಗಳನ್ನು ಬಳಸುವ ಕುರಿತು ನಿಯಮಿತವಾಗಿ ಅರಿವು ಮೂಡಿಸಬೇಕು ಹಾಗೂ ಸರ್ಕಾರದ ಸೌಲಭ್ಯಗಳ ಕುರಿತು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಫಾಯಿ ಕರ್ಮಚಾರಿಗಳಿಗಾಗಿ ಕಾರ್ಯಾಗಾರಗಳನ್ನು ಏರ್ಪಡಿಸಬೇಕು ಎಂದು ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಅವರು ಮಾತನಾಡಿ ಜಿಲ್ಲೆಯಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಆ್ಯಕ್ಟ್ ಉಲ್ಲಂಘನೆಯಾದ ಪ್ರಕರಣಗಳು ಕಂಡು ಬಂದಿರುವುದಿಲ್ಲ ಎಂದು ಸಭೆಗೆ ತಿಳಿಸಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತಿಗಳ ಪಿಡಿಓಗಳಿಗೆ ತಮ್ಮ ವ್ಯಾಪ್ತಿಯ ಗ್ರಾಮಸಭೆಗಳಲ್ಲಿ ಪೌರಕಾರ್ಮಿಕರಿಗೆ ಸೌಲಭ್ಯ ಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಮನೆ ನಿರ್ಮಾಣ, ಪೌರಕಾರ್ಮಿಕರ ಮಹಿಳೆಯರ ಸಮಿತಿ ರಚನೆ, ಪೌರಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಸೌಲಭ್ಯದ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೆÇಲೀಸ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ.ರಡ್ಡೇರ, ವಿವಿಧ ತಾಲೂಕುಗಳ ಸಮಾಜ ಕಲ್ಯಾಣಾಧಿಕಾರಿಗಳು, ಸಮಿತಿಯ ನಾಮನಿರ್ದೇಶಿತ ಸದಸ್ಯರುಗಳು ಹಾಜರಿದ್ದರು.