ಕಾನೂನು ಪ್ರಕಾರ ಪ್ರಮುಖ ರಸ್ತೆಗಳ ಅಗಲೀಕರಣ; ಸಚಿವ ಡಿ.ಸುಧಾಕರ್
ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಜೂ.26: ಜಿಲ್ಲಾ ಕೇಂದ್ರದ ರಸ್ತೆಗಳು ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದ್ದು, ಕಾನೂನು ಪ್ರಕಾರ ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡಬೇಕು ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ‌ ಮಾತನಾಡಿದ ಅವರು, ನಗರಗಳನ್ನು ಅಭಿವೃದ್ದಿ ಮಾಡುವ ಜವಬ್ದಾರಿ ಅಧಿಕಾರಿಗಳ ಮೇಲಿದ್ದು, ಯಾವುದೇ ರಸ್ತೆ ಮಾಡಬೇಕಾದರೆ ಮೊದಲು ರೂಪರೇಷೆ ತಯಾರಿಸಿಕೊಳ್ಳಬೇಕು. ಆದರೆ ಜಿಲ್ಲಾ ಕೇಂದ್ರದಲ್ಲಿ ಇದ್ಯಾವುದನ್ನು ಮಾಡದೆ, ಕಾನೂನಿನ ಸುತ್ತೋಲೆಯನ್ನು ಗಾಳಿಗೆ ತೂರಿ, ಮನಬಂದಂತೆ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಕಿಡಿಕಾರಿದರು.ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಸರ್ಕಲ್ ನಿಂದ ಬಸ್ ನಿಲ್ದಾಣಕ್ಕೆ ಹೋಗಬೇಕಾದರೆ ಕನಿಷ್ಟ ಅರ್ಧ ಗಂಟೆ ಸಮಯ ಬೇಕಿದೆ. ಕಾರಣ ಅಷ್ಟೊಂದು ಚಿಕ್ಕದಾಗಿದೆ ರಸ್ತೆ. ಒಂದು ವಾಹನ ಹೋದರೆ, ಆ ವಾಹನ ಹೋಗುವವರೆಗೂ ಮತ್ತೊಂದು ವಾಹನ ಕಾಯುತ್ತಾ ನಿಲ್ಲಬೇಕಿದೆ. ಕಾನೂನು ಪ್ರಕಾರ ಪ್ರಮುಖ ರಸ್ತೆಗಳು ಇಂತಿಷ್ಟು ಅಗಲ ಇರಬೇಕು ಎಂದಿದೆ. ಆದರೆ ನಗರಸಭೆಯವರು ಯಾರದೋ ಮಾತನ್ನು ಕೇಳಿ ಆ ಕಾನೂನು ಸುತ್ತೋಲೆಯನ್ನೆ ಸುಟ್ಟು ಹಾಕಿದ್ದಾರೆ. ಇಂತಹವರಿಂದ ಜಿಲ್ಲೆಯ ಅಭಿವೃದ್ದಿ ಸಾಧ್ಯವೇ ಎಂದು‌ ಕಿಡಿಕಾರಿದರು.ಜನಸಂದಾಣೆ ಹೆಚ್ಚಿರುವ ಚಳ್ಳಕೆರೆ ಗೇಟ್ ಹತ್ತಿರ ಸರ್ಕಲ್ ಮಾಡಬೇಕು. ಚಳ್ಳಕೆರೆ, ಬೆಂಗಳೂರು, ಹೊಸಪೇಟೆ ಎಲ್ಲಾ ಕಡೆ ಹೋಗುವ ವಾಹನಗಳಿಗೆ ಇದು ಜಂಕ್ಷನ್ ಪಾಯಿಂಟ್ ಆಗಿದೆ. ಆದ್ದರಿಂದ ಅಲ್ಲಿ ರಸ್ತೆ ಅಗಲೀಕರಣ ಮಾಡಿ ಸರ್ಕಲ್ ನಿರ್ಮಿಸಿಬೇಕು. ಅದೇ ರೀತಿ ಸರ್ಕಾರಿ ವಿಜ್ಞಾನ ಕಾಲೇಜು ಮುಂದಿರುವ ವಿಶಾಲವಾದ ರಸ್ತೆಯಷ್ಟೇ ಮುರುಘಾ ಮಠದ ವರೆಗೂ ರಸ್ತೆ ಇರಬೇಕು. ಆದರೆ ಆಧಿಕಾರಿಗಳು ಕೆಲವರ ಕಣ್ಣಿಗೆ ಬೆಣ್ಣೆ, ಕೆಲವರ ಕಣ್ಣಿಗೆ ಸುಣ್ಣ ಎಂಬಂತೆ ಕೆಲಸ ಮಾಡಿದ್ದಾರೆ. ಇದರಿಂದ ರಸ್ತೆಗಳು ಆಳಾಗಿವೆ ಎಂದರು.