ಮಾದಕ ವ್ಯಸನದಿಂದ ಅಪರಾಧ ಹೆಚ್ಚಳ: ಪರಂ ಕಳವಳ
ಬೆಂಗಳೂರು,ಜೂ.೨೬-ಮಾದಕ ವ್ಯಸನದಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.
ಮಾದಕವಸ್ತುಗಳ ಸರಬರಾಜು ಮಾರಾಟ ಸೇವನೆಯನ್ನು ಕಟ್ಟುನಿಟ್ಟಾಗಿ ತಡೆಯುವ ಮೂಲಕ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಇಂದು ರಾಜ್ಯ ಪೊಲೀಸ್ ಇಲಾಖೆಯು ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ವ್ಯಸನ ಮತ್ತು ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು
ಮಾದಕ ವ್ಯಸನ ಪಿಡುಗಾಗಿ ಪರಿಣಮಿಸಿದ್ದು,ಇದು ಯುವ ಸಮುದಾಯವನ್ನೇ ಹಾಳು ಮಾಡುತ್ತಿದೆ. ಮಾದಕ ವಸ್ತುಗಳ ವ್ಯಸನದ ಸಮಸ್ಯೆಯನ್ನು ಅರ್ಥೈಸಿಕೊಂಡ ವಿಶ್ವಸಂಸ್ಥೆಯು ೧೯೮೭ರಲ್ಲಿ ಮಾದಕ ವಸ್ತು ವಿರೋಧಿ ದಿನವನ್ನು ಜೂ.೨೬ರಂದು ಆಚರಿಸಲು ನಿರ್ಣಯಿಸಿತು ಎಂದರು.
ಭಾರತದಲ್ಲಿ ಸುಮಾರು ೫ ಕೋಟಿ ಜನ ಮಾದಕ ವ್ಯಸನಕ್ಕೆ ಸಿಲುಕಿದ್ದಾರೆ. ಯುವಕರು ಹಾಳಾದರೆ, ದೇಶ ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ. ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಬಹಳ ಎಚ್ಚರಿಕೆಯಿಂದ ದೇಶದ ಮುಂದಿನ ಭವಿಷ್ಯವನ್ನು ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚುವಾಗ ೧೭ ರಿಂದ ೨೦ ವರ್ಷದೊಳಗಿನವರೇ ಭಾಗಿಯಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ತಪ್ಪಿತಸ್ಥರನ್ನು ತಪಾಸಣೆಗೆ ಒಳಪಡಿಸಿದಾಗ ಮಾದಕ ವ್ಯಸನಿಯಾಗಿದ್ದರು ಎಂಬುದು ಗೊತ್ತಾಗುತ್ತಿದೆ. ಮಾದಕ ವ್ಯಸನದಿಂದ ಸಮಾಜಕ್ಕೆ ಅಪಾಯವಿದ್ದು, ಪಾಲಕರು ತಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಹೆಚ್ಚು ಜಾಗೃತಿ ಮೂಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣದ ಘೋಷಣೆ ಮಾಡಿದೆ. ಸಂಪೂರ್ಣವಾಗಿ ಡ್ರಗ್ಸ್ ಮಟ್ಟ ಹಾಕುವ ನಿಟ್ಟಿನಲ್ಲಿ ಇಲಾಖೆಯು ಯುದ್ಧವನ್ನೇ ಸಾರಿದೆ. ೪೦ ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದ್ದು, ೧೦ ಟನ್ ಗಾಂಜಾ ಸುಟ್ಟು ಹಾಕಲಾಗಿದೆ. ಇಷ್ಟೊಂದು ಪ್ರಮಾಣದ ಡ್ರಗ್ಸ್ ಯುವಕರ ಕೈಸೇರಿದ್ದರೆ ಎಷ್ಟು ಕುಟುಂಬಗಳು ಹಾಳಾಗುತ್ತಿದ್ದವೋ ಎಂದು ಆತಂಕ ವ್ಯಕ್ತಪಡಿಸಿದರು.
ಡ್ರಗ್ಸ್ ನಿಂದ ದೂರ ಇರುತ್ತೇವೆ ಎಂದು ಪ್ರತಿಯೊಬ್ಬರೂ ಸಂಕಲ್ಪ ಮಾಡಿಕೊಳ್ಳಬೇಕು. ಐಟಿ ಕಂಪನಿಗಳು ಕೈಗಾರಿಕೆಗಳು ಡ್ರಗ್ಸ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ, ಪ್ರತಿ ವರ್ಷ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ದಿನಾಚರಣೆ ನಡೆಸಲಾಗುತ್ತದೆ. ಈ ವರ್ಷ ‘ಸಾಕ್ಷಿ ಅಸ್ಪಷ್ಟ ನಿಯಂತ್ರಣ ಅವಶ್ಯ ಧ್ಯೇಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ರಾಜ್ಯವನ್ನು ಮಾದಕವ್ಯಸನ ಮುಕ್ತಗೊಳಿಸಲು ದೃಢ ಸಂಕಲ್ಪದೊಂದಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಮಾದಕ ದ್ರವ್ಯ ಸಮಾಜಕ್ಕೆ ದೊಡ್ಡ ರೋಗವಾಗಿ ಅಂಟಿಕೊಳ್ಳುತ್ತಿದ್ದು, ಯುವ ಪೀಳಿಗೆ ಸಂಕಷ್ಟಕ್ಕೆ ಸಿಲುಕದಂತೆ ಜಾಗೃತಿ ಮೂಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಾದಕ ವ್ಯಸನದ ವಿರುದ್ಧವಾಗಿ ಜಾಗೃತಿ ಪ್ರಾತಿಕ್ಷಿಕೆಗಳನ್ನು ಪ್ರದರ್ಶನ ನಡೆಸಿ ಜಪ್ತಿ ಮಾಡಲಾದ ೪೨ ಕೋಟಿ ರೂ. ಮೌಲ್ಯದ ೧,೨೨೭ ಕೆಜಿ ಪ್ರಮಾಣದ ಗಾಂಜಾ, ಕೊಕೈನ್‌ನಂತಹ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು
ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್,ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ. ಕೆ.ಗೋವಿಂದರಾಜ್,
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಸಿಐಡಿ ವಿಭಾಗದ ಡಿಜಿಪಿ ಡಾ. ಎಂ.ಎ.ಸಲೀಂ, ಎಡಿಜಿಪಿ ಪ್ರಣಬ್ ಮೋಹಾಂತಿ ಇನ್ನಿತರರಿದ್ದರು.