ಪ್ರಗತಿ ಪರಿಶೀಲನಾ ಸಭೆ

ಧಾರವಾಡ,ಜೂ.26: ಸರಕಾರದಿಂದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿ, ಯೋಜನೆಗಳಿಗೆ ಬಿಡುಗಡೆ ಆಗುವ ಅನುದಾನವನ್ನು ಸಕಾಲದಲ್ಲಿ ಬಳಸದೇ, ಅದು ಲ್ಯಾಪ್ಸ್ ಆದರೇ ಸಂಬಂಧಿಸಿದ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಿ, ಅವರಿಂದಲೇ ಅದನ್ನು ವಸೂಲು ಮಾಡಲು ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.
ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ 2024 ನೇ ಸಾಲಿನ ಮಾರ್ಚ ಅಂತ್ಯಕ್ಕೆ ಕೊನೆಗೊಂಡಂತೆ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಕೆಡಿಪಿ ಸಭೆ ಜರುಗಿಸಿ, ಮಾತನಾಡಿದರು.
ಇಲಾಖೆಗಳಿಗೆ ಬಿಡುಗಡೆ ಆಗಿರುವ ಅನುದಾನ ಪೂರ್ಣ ಬಳಕೆ ಆಗಬೇಕು. ನಿಧಾನಗತಿ ಅಥವಾ ಬಳಕೆಯಲ್ಲಿ ನಿರ್ಲಕ್ಷ್ಯವಹಿಸಿದರೆ ಸಲ್ಲದು. ಕ್ರಿಯಾಯೋಜನೆ ರೂಪಿಸಿ, ಗುರಿ ನಿಗದಿಗೊಳಿಸುವಾಗ ಆರ್ಥಿಕ ಗುರಿಯನ್ನು ಗುರುತಿಸಬೇಕು. ಅದರ ಪ್ರಕಾರ ಪ್ರಗತಿ ಸಾಧಿಸಬೇಕೆಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಉತ್ತಮವಾಗಿ ಸಾಗುತ್ತಿವೆ. ಮೇ ತಿಂಗಳಲ್ಲಿ ಶೇ 20 ರಷ್ಟು ಹೆಚ್ಚುವರಿ ಮಳೆ ಆಗಿದ್ದರೆ, ಜೂನ್ ತಿಂಗಳಲ್ಲಿ ಅದು ಶೇ. 15 ರಿಂದ 20 ರಷ್ಟು ಕಡಿಮೆ ಆಗಿದೆ. ಜುಲೈ ತಿಂಗಳಲ್ಲಿ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ ಎಂದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಸುಮಾರು 92 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಆಗಿದೆ. ಸೋಯಾ, ಹತ್ತಿ, ಶೇಂಗಾ, ಉದ್ದು ಸೇರಿದಂತೆ ಶೇ 90 ರಷ್ಟು ಪ್ರದೇಶ ಈಗಾಗಲೇ ಬಿತ್ತನೆ ಆಗಿದೆ ಕುಡಿಯುವ ನೀರು ಸರಬರಾಜು ಅಗತ್ಯವಿರುವ ಗ್ರಾಮಗಳಲ್ಲಿ ಮುಂದುವರಿಸಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಥವಾ ಗ್ರಾಮ ಪಂಚಾಯತಿಗಳಿಂದ ಅನುದಾನ ಪೂರೈಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಾಮಗಾರಿ ಕಳಪೆ, ವಿಳಂಬ ಮಾಡಿದರೆ ಕಪ್ಪು ಪಟ್ಟಿಗೆ ಸೇರಿಸಿ:: ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ಜೆ.ಜೆ.ಎಂ. ಸೇರಿದಂತೆ ಯಾವುದೇ ಕಾಮಗಾರಿ ಅನುಷ್ಠಾನದಲ್ಲಿ ನಿಧಾನಗತಿ, ನಿರ್ಲಕ್ಷ್ಯ, ಕಳಪೆ ಗುಣಮಟ್ಟ ಮಾಡಿದರೆ ಅವರು ಡಿಪಾಜಿಟ್ ಮುಟ್ಟುಗೊಲು ಹಾಕಿಕೊಂಡು ಬ್ಲ್ಯಾಕ್ ಲಿಸ್ಟ್‍ಗೆ ಸೇರಿಸಲು ಕ್ರಮವಹಿಸಿ. ಇಲಾಖೆ ಹಂತದಲ್ಲಿ ಆಗದಿದ್ದರೆ ನನಗೆ ಶಿಪಾರಸ್ಸು ಮಾಡಿ ನಾನೆ ಸರಕಾರದಿಂದ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ವಹಿಸುತ್ತೇನೆ ಎಂದರು.
ಸಭೆಯಲ್ಲಿ ಶಾಸಕರಾದ ಎನ್.ಎಚ್.ಕೋನರಡ್ಡಿ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ ಅವರು ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಅವರು ಸ್ವಾಗತಿಸಿ, ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸಭೆ ನಿರ್ವಹಿಸಿದರು.
ವೇದಿಕೆಯಲ್ಲಿ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಇದ್ದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿ, ಪ್ರಗತಿ ವರದಿ ಮಂಡಿಸಿದರು.