ಸಾಹಿತ್ಯ, ಸಂಶೋಧನೆಗೆ ಅನನ್ಯ ಕೊಡುಗೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.26:- ಕನ್ನಡ ಸಾಹಿತ್ಯ ಮತ್ತು ಸಂಶೋಧನೆಗೆ ಕಮಲಾ ಹಂಪನಾ ಕೊಡುಗೆ ಅನನ್ಯ. ಸ್ತ್ರೀ ಸಂವೇದನೆಗೆ ಸಂಬಂಧಿಸಿದ ಸಂಶೋಧನೆ, ಜೈನ ಸಾಹಿತ್ಯ ಅವರ ವಿಶೇಷ ಅಧ್ಯಯನ ಕ್ಷೇತ್ರವಾಗಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಹೇಳಿದರು.
ನಗರದ ಗಾಂಧಿನಗರದಲ್ಲಿರುವ ಉರಿಲಿಂಗಿ ಪೆದ್ದೇಶ್ವರ ಮಠದಲ್ಲಿ ಜೈ ಭೀಮ್ ಜನಸ್ಪಂದನ ವೇದಿಕೆ ವತಿಯಿಂದ ನಾಡೋಜ ಕಮಲಾ ಹಂಪನಾ ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಹಳೆಗನ್ನಡ ಸಾಹಿತ್ಯದ ಸಮಗ್ರ ಅಧ್ಯಯನದಿಂದಾಗಿ ಮಹತ್ವದ ಕನ್ನಡ ಕಾವ್ಯಗಳನ್ನು ಸಂಗ್ರಹಿಸಿ ಕೊಟ್ಟರು. ಸ್ತ್ರೀವಾದಿ ನೆಲೆಯಲ್ಲಿ ವಿಮರ್ಶೆ, ಮಹಿಳೆಯರನ್ನು ಕುರಿತ ವೈಚಾರಿಕ ಬರಹಗಳೊಂದಿಗೆ ಕನ್ನಡ ಮಹಿಳಾ ಸಾಹಿತ್ಯ ವಿಸ್ತರಿಸಿದರು. ಕಮಲಾ ಹಂಪನಾ ಅವರ ಕನ್ನಡ ಸಾಹಿತ್ಯ ಸಂಶೋಧನೆ ಮತ್ತು ಚಿಂತನೆಗಳಿಗೆ ಅವರಿಗೆ ಕಲಿಸಿದ ದೊಡ್ಡ ಗುರುಪರಂಪರೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿತ್ತು ಎಂದರು.
ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷರಾದ ಡಾ. ವೈ ಡಿ ರಾಜಣ್ಣ ಕಮಲಾಪ್ರಿಯ ಕಾವ್ಯನಾಮದ ಮೂಲಕ ಹಲವು ಸೃಜನಶೀಲ ಕೃತಿಗಳನ್ನು ಬರೆದ ಕಮಲಾ ಹಂಪನಾ, ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚನೆ ಮಾಡಿದ್ದಾರೆ. ಕಥಾ ಸಂಕಲನಗಳು, ವಿಮರ್ಶಾ ಕೃತಿಗಳು, ಸಂಶೋಧನಾ ಗ್ರಂಥಗಳು, ಅನುವಾದಗಳು, ನಾಟಕ ರೂಪಕಗಳು, ಕಾದಂಬರಿಗಳನ್ನು ಬರೆದಿದ್ದಾರೆ. ಕಮಲಾ ಹಂಪನಾ ಅವರ ಸಾಧನೆ ಗುರುತಿಸಿ ಹಲವು ಪ್ರಶಸ್ತಿಗಳು ಮತ್ತು ಗೌರವಗಳು ಸಂದಿವೆ. ಮೂಡುಬಿದಿರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂದು ಸ್ಮರಿಸಿದರು.
ಸಾಹಿತಿ ಡಾಕ್ಟರ್ ಲೀಲಾ ಪ್ರಕಾಶ್ ಮಾತನಾಡಿ, ಜೈನಧರ್ಮವು ಪ್ರತಿಪಾದಿಸಿದ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಪ್ರಧಾನ್ಯತೆ ಇದೆ. ಕಮಲಾ ಹಂಪನಾ ಅವರು ಜೈನ ಧರ್ಮ ಮತ್ತು ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿದವರು ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಮಾಜಿ ಅಧ್ಯಕ್ಷರಾದ ಡಾ. ವೈ ಡಿ ರಾಜಣ್ಣ, ಸಾಹಿತಿ ಡಾಕ್ಟರ್ ಲೀಲ ಪ್ರಕಾಶ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷರಾದ ಚೇತನ್ ಕಾಂತರಾಜ್,ಕರ್ನಾಟಕ ಭೀಮ ಸೇನೆ ಸಂಘಟನಾ ರಾಜ್ಯ ಕಾರ್ಯದರ್ಶಿ ಎಂ ಮಂಜುನಾಥ್,ಮುಖಂಡರಾದ ಪ್ರಮೋದ್, ಪ್ರಕಾಶ್,ಹಿರಿಯರಾದ ನಾಗಣ್ಣ ,ರಾಮ್ ಸಿಂಗ್,ದೇವೇಂದ್ರ, ರಾಜೇಶ್, ವರುಣ ಮಹದೇವ ಇನ್ನು ಮುಂತಾದವರು ಭಾಗವಹಿಸಿದ್ದರು.