ಹತ್ತಾರು ವರ್ಷಗಳ ರಸ್ತೆ ಸಮಸ್ಯೆಗೆ ಶಾಸಕರಿಂದ ಪರಿಹಾರ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.26: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿಹೋಗಿರುವ ಸಾರ್ವಜನಿಕ ರಸ್ತೆಗೆ ಪರ್ಯಾಯವಾಗಿ ಪಾಲಿಟೆಕ್ನಿಕ್ ಆವರಣದ ಅಂಚಿನ ಜಾಗದಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಅಗತ್ಯ ಜಾಗ ಬಿಡಲು ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದ್ದು ಹತ್ತಾರು ವರ್ಷಗಳ ರೈತರ ಸಮಸ್ಯೆಗೆ ಪರಿಹಾರ ದೊರಕಿದೆ.
ಶಾಸಕ ಹೆಚ್.ಟಿ.ಮಂಜು ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ರೈತರಿಗೆ ಅಗತ್ಯ ರಸ್ತೆ ಬಿಡುವ ತೀರ್ಮಾನಕ್ಕೆ ಬರಲಾಯಿತು.
1959 ರಲ್ಲಿ ಪಟ್ಟಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಆರಂಭಗೊಂಡು ಇದಕ್ಕಾಗಿ 26 ಎಕರೆ ಪ್ರದೇಶವನ್ನು ರೈತರಿಂದ ವಶಪಡಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪಾಲಿಟೆಕ್ನಿಕ್ ಹಿಂಭಾಗದಲ್ಲಿರುವ ಕೃಷಿ ಭೂಮಿಗೆ ರೈತರು ಹೋಗಿ ಬರಲು ಇದ್ದ ರಸ್ತೆ ಪಾಲಿಟೆಕ್ನಿಕ್ ಆವರಣದೊಳಕ್ಕೆ ಸೇರಿಕೊಂಡು ರೈತರ ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತು. ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣಗೊಂಡ ಅನಂತರವೂ ಪಾಲಿಟೆಕ್ನಿಕ್ ಹಿಂಭಾಗದಲ್ಲಿರುವ ರೈತರು ತಮ್ಮ ಕೃಷಿ ಭೂಮಿಗೆ ಹೋಗಲು ಪಾಲಿಟೆಕ್ನಿಕ್ ಆವರಣವನ್ನೆ ಬಳಕೆ ಮಾಡುತ್ತಿದ್ದರು. ಕಳೆದ ಒಂದು ದಶಕದ ಹಿಂದೆ ಪಾಲಿಟೆಕ್ನಿಕ್ ಜಾಗದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಡಿಪೆÇೀ ನಿರ್ಮಾಣಗೊಂಡವು. ಪಾಲಿಟೆಕ್ನಿಕ್ ಜಾಗವನ್ನು ಕಿತ್ತು ಬಸ್ ಡಿಪೆÇೀ ಮತ್ತು ಇಂಜಿನಿಯರಿಂಗ್ ಕಾಲೇಜಿಗೆ ನೀಡಲಾಯಿತಾದರೂ ದೂರದೃಷ್ಠಿಯ ಕೊರತೆಯಿಂದ ಅಂದಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪಾಲಿಟೆಕ್ನಿಕ್ ಹಿಂಬಾಗದಲ್ಲಿ ಕೃಷಿ ಭೂಮಿ ಹೊಂದಿರುವ ರೈತರ ಬಗ್ಗೆ ಆಲೋಚಿಸಲಿಲ್ಲ. ಇದರ ಪರಿಣಾಮ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಆವರಣದೊಳಗಿನ ಸಾರ್ವಜನಿಕ ರಸ್ತೆಯನ್ನು ಮುಚ್ಚಿ ರೈತರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿತು. ಮೂಲ ನಕಾಶೆಯಂತೆ ಪಾಲಿಟೆಕ್ನಿಕ್ ಆವರಣದೊಳಗೆ ಮುಚ್ಚಿರುವ ರೈತರ ರಸ್ತೆಯನ್ನು ಬಿಡಿಸಿಕೊಡುವಂತೆ ಪಾಲಿಟೆಕ್ನಿಕ್ ಹಿಂಭಾಗದ ರೈತರು ಕಳೆದ ಒಂದು ದಶಕದಿಂದ ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿರಲಿಲ್ಲ.
ರೈತರು ಓಡಾಡಲು ತೀವ್ರವಾದ ಸಂಕಷ್ಠವನ್ನು ಅನುಭವಿಸುತ್ತಿರುವುದನ್ನು ಕಣ್ಣಾರೆ ಕಂಡಿದ್ದ ಶಾಸಕ ಹೆಚ್.ಟಿ.ಮಂಜು ರೈತರ ಮನವಿಗೆ ಸ್ಪಂಧಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ತಾಂತ್ರಿಕ ಶಿಕ್ಷಣ ಇಲಾಖೆಯ ಕಮೀಷನರ್ ಜಗದೀಶ್ ಹಾಗೂ ಜಂಟಿ ನಿರ್ದೇಶಕರಾದ ನಾಗಭೂಷಣ್ ಅವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದ ಶಾಸಕರು ಪಾಲಿಟೆಕ್ನಿಕ್ ಆವರಣದೊಳಗೆ ಮುಚ್ಚಿ ಹಾಕಿರುವ ರೈತರ ರಸ್ತೆ ಹಾಗೂ ಅದರಿಂದ ಪಟ್ಟಣದ ರೈತ ಸಮುದಾಯಕ್ಕೆ ಉಂಟಾಗಿರುವ ಸಂಕಷ್ಠದ ಬಗ್ಗೆ ಚರ್ಚಿಸಿದರು. ಅಂತಿಮವಾಗಿ ಪಾಲಿಟೆಕ್ನಿಕ್ ಕಾಲೇಜಿನ ಮಧ್ಯಭಾಗದಲ್ಲಿ ರೈತರು ಓಡಾಡಲು ಬಳಸುತ್ತಿದ್ದ ಕಚ್ಚಾ ರಸ್ತೆಗೆ ಪರ್ಯಾಯವಾಗಿ ಬಸ್ ಡಿಪೆÇೀಗೆ ಹೊಂದಿಕೊಂಡಂತೆ ಪಾಲಿಟೆಕ್ನಿಕ್ ಕಾಂಪೌಂಡ್ ಪಕ್ಕದಲ್ಲಿ ರಸ್ತೆಯನ್ನು ನಿರ್ಮಿಸಿ ರೈತರು ಸೇರಿದಂತೆ ಸಾರ್ವಜನಿಕರು ಓಡಾಡಲು ಅನುಕೂಲ ಮಾಡಿಕೊಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ನಿಸರ್ಗಪ್ರಿಯ ಪ್ರಸ್ತುತ ಪಾಲಿಟೆಕ್ನಿಕ್ ಕಟ್ಟಡದ ಪಕ್ಕದಲ್ಲಿ ನಿರ್ಮಿಸಿರುವ ಬಸ್ ಡಿಪೆÇೀಗೆ ಹೊಂದಿಕೊಂಡಂತೆ ರಸ್ತೆಯ ನಿರ್ಮಾಣಕ್ಕೆ ತಕ್ಷಣವೇ ಕ್ರಮ ಕೈಗೊಂಡು ರಸ್ತೆಗೆ ಸೂಚಿಸಿರುವ ಜಾಗವನ್ನು ಭೂದಾಖಲೆಯಲ್ಲಿ ನಮೂದಿಸಿಕೊಟ್ಟು ಅನುಕೂಲ ಮಾಡಿಕೊಡುತ್ತೇನೆ ಎಂದರು.
ತಕ್ಷಣವೇ ರಸ್ತೆ ನಿರ್ಮಾಣಕ್ಕೆ ಸ್ಥಳ ಗುರುತಿಸಿಕೊಡಿ ಎಂದು ಸಭೆಯಲ್ಲಿದ್ದ ಭೂದಾಖಲೆಗಳ ಸಹಾಯಕ ನಿರ್ದೇಶಕ ಸಿದ್ಧಯ್ಯ ಅವರಿಗೆ ಶಾಸಕರು ನಿರ್ದೇಶನ ನೀಡಿದರು.