ಸರ್ಕಾರಿ ಭೂಮಿ ಸಂರಕ್ಷಣೆಗೆ ವಿಶೇಷ ತಂಡ ರಚನೆಗೆ ಒತ್ತಾಯ
ಮುಳಬಾಗಿಲು,ಜೂ,೨೬- ಬೆಂಗಳೂರು ರಿಯಲ್ ಎಸ್ಟೇಟ್ ದಂದೆಕೋರರ ಪಾಲಾಗುತ್ತಿರುವ ಸರ್ಕಾರಿ ಆಸ್ತಿಗಳನ್ನು ಉಳಿಸಲು ವಿಶೇಷ ತಂಡ ರಚನೆ ಮಾಡಿ ರೈತರ ಹೆಸರಿನಲ್ಲಿ ಅಕ್ರಮ ಸಾಗುವಳಿ ಚೀಟಿ ಸೃಷ್ಟಿಸಿರುವ ಕಂದಾಯ ಸರ್ವೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದಿಂದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ನೂರಾರು ವರ್ಷಗಳ ಇತಿಹಾಸ ಇರುವ ನಂಗಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ೯ ಮತ್ತು ೧೦ ನೇ ತರಗತಿಗೆ ಅನುಮತಿ ನೀಡಿ ಬಡ ಮಕ್ಕಳ ಶಿಕ್ಷಣವನ್ನು ರಕ್ಷಣೆ ಮಾಡಬೇಕೆಂದು ಶಾಸಕರಿಗೆ ರೈತ ಸಂಘದ ಯುವ ಮುಖಂಡ ನಂಗಲಿ ನಾಗೇಶ್ ಒತ್ತಾಯಿಸಿದರು.
ತಾಲ್ಲೂಕು ಕಛೇರಿ ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಜನ ಸಾಮಾನ್ಯರು ತಿಂಗಳಾನುಗಟ್ಟಲೆ ಅಲೆದಾಡಿದರೂ ಚಿಕ್ಕಸಮಸ್ಯೆಯು ಸಹ ಬಗೆ ಹರಿಸಲು ಅಧಿಕಾರಿಗಳಿಗೆ ಸಮಯ ಇರುವುದಿಲ್ಲ. ಆದರೆ ಸರ್ಕಾರಿ ಕೆರೆ, ಗೋಮಾಳ, ಗುಂಡು ತೋಪು, ರಾಜಕಾಲುವೆಗಳಿಗೆ ರಾತ್ರೊರಾತ್ರಿ ಅಕ್ರಮ ದಾಖಲೆ ಸೃಷ್ಟಿ ಮಾಡಿ ಗ್ರಾಮೀಣ ಸೇವೆ ಮಾಡಬೇಕಾದ ಕಂದಾಯ ಸರ್ವೆ ಅಧಿಕಾರಿಗಳು ರಿಯಲ್ ಎಸ್ಟೇಟ್ ದಂದೆಕೋರರ ಗುಲಾಮರಾಗಿ ಕೆಲಸ ನಿರ್ವಹಿಸುತ್ತಿದ್ದಾರೆಂದು ಶಾಸಕರಿಗೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರು ನೀಡಿದರು.
ರೈತ ಸಂಘದ ರಾಜ್ಯ ಮುಖಂಡ ಬಂಗಾರಿ ಮಂಜು, ಪಾರುಕ್‌ಪಾಷ, ಮಾತನಾಡಿ ನಗರದಲ್ಲಿ ಅಭಿವೃದ್ದಿಪಡಿಸುತ್ತಿರುವ ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಮಾಡುತ್ತಿರುವ ಎನ್.ಹೆಚ್.ಎ.ಐ ಅಧಿಕಾರಿಗಳು ಬಲಾಡ್ಯರ ಒತ್ತಡಕ್ಕೆ ಮಣಿದು ಒಂದು ಕಡೆ ಮಾತ್ರ ಕಟ್ಟಡ, ನಿವೇಶನ, ಅಂಗಡಿಗಳನ್ನು ತೆರೆವು ಮಾಡುತ್ತಿರುವ ಅಧಿಕಾರಿಗಳಿಗೆ ತಾರತಮ್ಯ ಮಾಡದಂತೆ ಸೂಚನೆ ಮಾಡಬೇಕೆಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ದೇವರಾಯಸಮುದ್ರ ಕಂದಾಯ ವ್ಯಾಪ್ತಿಯ ನೂರಾರು ಎಕರೆ ಗೋಮಾಳವನ್ನು ಸ್ಥಳೀಯ ರೈತರ ಹೆಸರಿನಲ್ಲಿ ಅಕ್ರಮ ಸಾಗುವಳಿ ಚೀಟಿಗಳನ್ನು ಸೃಷ್ಟಿ ಮಾಡಿ ರಿಯಲ್ ಎಸ್ಟೆಟ್ ದಂದೆಕೋರರಿಗೆ ಕೋಟಿ ಕೋಟಿ ಬೆಳೆ ಬಾಳುವ ಜಮೀನನ್ನು ಅಧಿಕಾರಿಗಳೇ ಮಾರಾಟ ಮಾಡಿದ್ದಾರೆಂದು ಹದಗೆಟ್ಟಿರುವ ತಾಲ್ಲೂಕು ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಟಿ.ಕುರುಬರಹಳ್ಳಿ ಗ್ರಾಮದ ಸ.ನಂ. ೩೬/೧ ಮತ್ತು ೩೭ ರಲ್ಲಿ ೬೫ ಎಕರೆ ಗೋಮಾಳವನ್ನು ಕುರಿಗಾಯಿಗಳಿಗೆ ಮೀಸಲಿಟ್ಟು ನಾಮಫಲಕ ಅಳವಡಿಸಿದ್ದರೂ ಆ ಜಮೀನನ್ನು ಪ್ರಭಾವಿಗಳಿಗೆ ಮಂಜೂರು ಮಾಡಲು ಅಧಿಕಾರಿಗಳು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಕುರಿಗಾಯಿಗಳಿಗೆ ಮೀಸಲಿಟ್ಟಿರುವ ಜಮೀನುಗಳನ್ನು ಬಲಾಡ್ಯರಿಗೆ ಮಂಜೂರು ಮಾಡದಂತೆ ಹಾಗೂ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ದಂದೆಕೋರರಿಂದ ಸರ್ಕಾರಿ ಆಸ್ತಿಗಳನ್ನು ಉಳಿಸಲು ವಿಶೇಷ ತಂಡ ರಚನೆ ಮಾಡಬೇಕು. ಹಾಗೂ ಅವರಿಗೆ ಸಹಕರಿಸುತ್ತಿರುವ ಕಂದಾಯ ಸರ್ವೆ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ಪ್ರತಿ ಹಳ್ಳಿಯಲ್ಲೂ ಜಾನುವಾರುಗಳ ರಕ್ಷಣೆಗೆ ೧೦೦ ಎಕರೆ ಜಮೀನು ಮೀಸಲಿಡಬೇಕೆಂದು ಮನವಿ ಮೂಲಕ ಶಾಸಕರನ್ನು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಹೆಬ್ಬಣಿ ಆನಂದರೆಡ್ಡಿ, ರಾಜೇಶ್, ಭಾಸ್ಕರ್, ವಿಜಯ್‌ಪಾಲ್, ಸುನಿಲ್‌ಕುಮಾರ್, ಅಂಬ್ಲಿಕಲ್ ಮಂಜುನಾಥ, ವೇಣು, ಕೇಶವ, ನಂಗಲಿ ನಾಗೇಶ್, ಪದ್ಮಘಟ್ಟ ಧರ್ಮ, ಯಾರಂಘಟ್ಟ ಗಿರೀಶ್, ಮುಂತಾದವರು ಇದ್ದರು.