ಅಕ್ಷರ, ಅನ್ನ ಶ್ರೇಷ್ಠ ದಾಸೋಹಗಳು
ವಿಜಯಪುರ.ಜೂ೨೬:ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಅಕ್ಷರ ದಾಸೋಹ ಮತ್ತು ಅನ್ನದಾಸೋಹ ಅತ್ಯಂತ ಶ್ರೇಷ್ಠ ದಾಸೋಹಗಳಾಗಿದ್ದು,ಅವುಗಳನ್ನು ಮಾಡುವುದು ಉತ್ತಮ ಕೆಲಸವೆಂದು ಬಸವ ಕಲ್ಯಾಣ ಮಠ ಅಧ್ಯಕ್ಷರಾದ ಮಹದೇವಸ್ವಾಮಿಗಳು ತಿಳಿಸಿದರು.
ಇವರು ಪಟ್ಟಣದ ಶಿಡ್ಲಘಟ್ಟ ರಸ್ತೆಯಲ್ಲಿನ ಚಂದೇನಹಳ್ಳಿ ಗೇಟ್ ಬಳಿ ಜ್ಞಾನಗಂಗಾ ಪದವಿ ಕಾಲೇಜಿನ ನೂತನ ಕಟ್ಟಡದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಶಿಕ್ಷಕ ವರ್ಗ ತಮ್ಮ ತನು ಮನಗಳನ್ನು ಅರ್ಪಿಸಿ ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿತ್ವಗಳಾಗಿ ನಿರ್ಮಿಸಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಮಂಜುನಾಥ್ ಮಾತನಾಡಿ, ನಾವು ವೃತ್ತಿಯಿಂದ ಬೇರೆಯೇ ಆದರೂ ನಮ್ಮ ಮನ ಶಿಕ್ಷಣ ಸೇವೆಯೆಡೆಗೆ ತುಡಿಯುತ್ತಿದೆ. ಅದರ ಪರಿಣಾಮವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಸ್ಪರ್ಧಾತ್ಮಕ ರೀತಿಯಲ್ಲಿ ಶಿಕ್ಷಣ ನೀಡಲು ಶ್ರೀ ಸಾಯಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗಿದೆ. ಅದರ ಭಾಗವಾದ ಜ್ಞಾನಗಂಗಾ ಪದವಿ ಕಾಲೇಜಿಗೆ ಸುಸಜ್ಜಿತವಾದಂತಹ ಕಟ್ಟಡ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಆಟದ ಮೈದಾನದೊಂದಿಗೆ, ಸುಸಜ್ಜಿತವಾದ ಗ್ರಂಥಾಲಯ ಮತ್ತು ಪ್ರಯೋಗಾಲಯಗಳಿಗೂ ಆದ್ಯತೆ ನೀಡಲಾಗಿದೆ. ಗುಣಾತ್ಮಕ ಶಿಕ್ಷಣ ನೀಡುವುದಷ್ಟೇ ನಮ್ಮ ಧ್ಯೇಯವಾಗಿದ್ದು ಅತಿ ಕಡಿಮೆ ಶುಲ್ಕದಲ್ಲಿ, ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ ಎಂದರು.
ಪ್ರಾಂಶುಪಾಲ ಪ್ರೊ. ಎನ್ ಶ್ರೀನಿವಾಸಮೂರ್ತಿ ಮಾತನಾಡಿ, ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ಸಿಕ್ಕಲ್ಲಿ ಮಾತ್ರ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಯಲು ಸಾಧ್ಯ. ಈ ನಿಟ್ಟಿನಲ್ಲಿ ಸುಸಜ್ಜಿತ ಕಟ್ಟಡವನ್ನು ವಿದ್ಯಾರ್ಥಿಗಳಿಗೆ ನೀಡಿ ಇಂದು ಕಟ್ಟಡ ಪ್ರವೇಶ ಮಾಡಲಾಗಿದೆ. ಬಿಕಾಂ, ಬಿಸಿಎ, ಬಿಎ, ಬಿಎಸ್ಸಿ ಪದವಿಗಳನ್ನು ಗ್ರಾಮೀಣ ಭಾಗದಲ್ಲಿ ಹೊಂದಿದ ಏಕೈಕ ಕಾಲೇಜು ಇದಾಗಿದ್ದು ಇಲ್ಲಿ ಕೇವಲ ಶಿಕ್ಷಣ ನೀಡುತ್ತಿಲ್ಲ ಬದಲಿಗೆ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಪದವಿ ಮುಗಿದ ನಂತರ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆಯುವಂತಾಗಬಾರದು ಎಂದು ಸೂಕ್ತ ಕೌಶಲ್ಯಯುತ ಶಿಕ್ಷಣ ನೀಡಲಾಗುತ್ಯಿದೆ. ಸಂವಹನ ಕೌಶಲ್ಯ, ಔದ್ಯೋಗಿಕ ಕೌಶಲ್ಯಗಳೊಂದಿಗೆ, ಬ್ಯಾಂಕಿಂಗ್ ಮತ್ತು ಎಫ್‌ಡಿಎ, ಪಿಡಿಓ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿಯನ್ನೂ ಸಹ ನೀಡುತ್ತಿರುವುದು ನಮ್ಮಲ್ಲಿನ ವಿಶೇಷತೆ ಎಂದರು.
ಈ ಪೂಜಾ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ ನಿವೃತ್ತ ರಿಜಿಸ್ಟ್ರಾರ್ ಬಾಲಕೃಷ್ಣ, ಲಕ್ಷ್ಮೀ ನರಸಪ್ಪ, ಸಂಸ್ಥೆಯ ಗೌರವಾಧ್ಯಕ್ಷೆ ಛಾಯಾ ಮಂಜುನಾಥ್, ಕಾರ್ಯದರ್ಶಿ ನಾರಾಯಣಸ್ವಾಮಿ, ಜ್ಞಾನಗಂಗಾ ಪಿಯು ಕಾಲೇಜಿನ ಪ್ರಾಂಶುಪಾಲೆ ಭಾರತಿ, ಸಹಾಯಕ ಪ್ರಾಧ್ಯಾಪಕರುಗಳಾದ ಸೌಂದರ್ಯ, ದೀಪ, ಮುಬಾರಕ್, ಹರ್ಷಿತ, ಅರ್ಚನಾ, ರಾಖೇಶ್, ಮೂರ್ತಿ, ಪ್ರವರ್ಧನ್, ಹರೀಶ್, ನಾಗೇಶ್ ಸೇರಿದಂತೆ ಪಿಯುಸಿ ಮತ್ತು ಪದವಿಯ ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.