ಸರ್ಕಾರಿ ಶಾಲಾ-ಕಾಲೇಜು ಉಳಿಸಿ ಬೆಳೆಸಲು ಕರೆ
ಆನೇಕಲ್.ಜೂ೨೬:ಸರ್ಕಾರಿ ಶಾಲಾ-ಕಾಲೇಜುಗಳನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ನಾಗರೀಕರನ ಜವಬ್ದಾರಿಯಾಗಿದೆ ಎಂದು ರಾಷ್ಠೀಯ ಯುವ ಪ್ರಶಸ್ಥಿ ಪುರಸ್ಕೃತ ಡಾ.ಚಿನ್ನಪ್ಪ ಚಿಕ್ಕಹಾಗಡೆ ರವರು ತಿಳಿಸಿದರು.
ಅವರು ಪಟ್ಟಣದಲ್ಲಿರುವ ಎ.ಎಸ್.ಬಿ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಪ್ರಥಮ ಪಿಯುಸಿಯ ೧೦ ಜನ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಮತ್ತು ಸಮವಸ್ತ್ರ ಹಾಗೂ ನೋಟ್ ಪುಸ್ತಕವನ್ನು ಉಚಿತವಾಗಿ ವಿತರಿಸಿ ಮಾತನಾಡಿದರು. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾಬ್ಯಾಸ ಮಾಡಿದ ವಿದ್ಯಾರ್ಥಿಗಳೇ ದೇಶದ ಅತ್ಯುನ್ನತ ಹುದ್ದೆಯಲ್ಲಿರುವುದನ್ನು ನಾವು ಕಾಣಬಹುದಾಗಿದೆ. ಸರ್ಕಾರಿ ಶಾಲೆಗಳನ್ನು ಕಳೆದುಕೊಂಡರೆ ಭವಿಷ್ಯ ಮತ್ತು ಭರವಸೆ ಕಳೆದು ಕೊಂಡಂತೆ ಎಂದರು. ನನಗೆ ಶಿಕ್ಷಣವನ್ನು ನೀಡಿದ ಶಾಲೆಗೆ ಏನಾದರೂ ಸೇವೆ ಮಾಡಬೇಕು ಮತ್ತು ಸರ್ಕಾರಿ ಶಾಲಾ-ಕಾಲೇಜುಗಳನ್ನು ಉಳಿಸಿ ಬೆಳಸಬೇಕು ಎಂಬುವ ಉದ್ದೇಶದಿಂದ ನನ್ನ ಕೈಲಾದ ಮಟ್ಟಿಗೆ ಶಿಕ್ಷಣ ಕ್ಷೇತ್ರಕ್ಕೆ ಸೇವೆಯನ್ನು ಮಾಡುತ್ತಿದ್ದು ಉಳ್ಳವರು ಸಹ ತಮ್ಮ ಕೈಲಾದ ಮಟ್ಟಿಗೆ ಸರ್ಕಾರಿ ಶಾಲಾ ಕಾಲೇಜಿನ ಪ್ರಗತಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಇಂದು ರಾಜ್ಯದ ಅನೇಕ ಸರ್ಕಾರಿ ಶಾಲೆಗಳ ಹಲವು ಕಟ್ಟಡಗಳು ಸುರಕ್ಷಿತವಾಗಿಲ್ಲ. ಇದರ ಜೊತೆಗೆ ಇತರ ಮೂಲಸೌಕರ್ಯಗಳ ಕೊರತೆಯೂ ಶಾಲೆಗಳಲ್ಲಿ ಕಾಡುತ್ತಿದೆ. ಹಲವೆಡೆ ಶಾಲಾ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ, ಸಿಮೆಂಟ್ ಚಾವಣಿ ಇದ್ದೆಡೆ ಸಿಮೆಂಟ್ ಉದುರುತ್ತಿದೆ, ನಿರ್ವಹಣೆ ಇಲ್ಲ. ವಿದ್ಯಾರ್ಥಿಗಳಿದ್ದ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಸರ್ಕಾರಗಳು ಸಹ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಅನುದಾನ ನೀಡುವಲ್ಲಿ ಮೀನಾಮೇಷ ಮಾಡುತ್ತಿದೆ, ಖಾಸಗಿ ಶಾಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಈ ನಿಟ್ಟಿನಲ್ಲಿ ಇಂದು ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲಾ ಕಾಲೇಜುಗಳು ಮುಚ್ಚುವಂತಹ ಪರಿಸ್ಥಿತಿಗೆ ಬಂದಿದೆ ಎಂದರು. ಇನ್ನಾದೂ ಸರ್ಕಾರಗಳು, ಸ್ಥಳೀಯ ನಗರಸಭೆ, ಪುರಸಭೆ, ಪಂಚಾಯಿತಿಗಳು. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎ.ಎಸ್.ಬಿ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕವಿತಾ. ಶ್ರೀ ವಿನಾಯಕ ರೈತ ಯುವ ಸಂಘದ ಅದ್ಯಕ್ಷ ಎಂ.ರಾಜಪ್ಪ, ಬಿಜೆಪಿ ಜಿಲ್ಲಾ ಮುಖಂಡ ಸಾವಪ್ರಕಾಶ್ ಮತ್ತು ವಿದ್ಯಾರ್ಥಿಗಳು ಬಾಗವಹಿಸಿದ್ದರು.