ನೌಕರರ ಸಂಘದ ಕರಡು ಮತದಾರರಪಟ್ಟಿ ಜು.1 ಪ್ರಕಟ ಆಕ್ಷೇಪಣೆ ಸಲ್ಲಿಕೆಗೆ ಜು.10 ಕೊನೆ ದಿನ-ಜಿ.ಸುರೇಶ್‌ಬಾಬು
ಕೋಲಾರ,ಜೂ,೨೬:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯದಂತೆ ನೌಕರರ ಸಂಘದ ೨೦೨೪-೨೯ನೇ ಸಾಲಿನ ಅವಧಿಗೆ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಕರಡು ಮತದಾರರ ಪಟ್ಟಿಯನ್ನು ಜು.೧ ರಂದು ಪ್ರಕಟಸಲಿದ್ದು, ಜು.೨ ರಿಂದ ಜು.೧೦ ರವರೆಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಸಂಘದ ಕಾರ್ಯಕಾರಿ ಸಮಿತಿ ಸಭೆ ತೀರ್ಮಾನದಂತೆ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಶ್ರೀನಿವಾಸ್ ಈ ಕುರಿತು ಪ್ರಕಟಣೆ ಹೊರಸಿದ್ದು, ತಾಲ್ಲೂಕು ಶಾಖೆಗಲ ಮತಕ್ಷೇತ್ರಗಳು, ಯೋಜನಾಶಾಖೆಗಳ ಮತಕ್ಷೇತ್ರಗಳು, ಜಿಲ್ಲಾ ಶಾಖೆಗಳ ಮತಕ್ಷೇತ್ರಗಳು, ಬೆಂಗಳೂರು ನಗರ ರಾಜ್ಯಪರಿಷತ್ ಮತಕ್ಷೇತ್ರಗಳ ಕರಡು ಮತದಾರರ ಪಟ್ಟಿ ಜು.೧ ರಂದು ಪ್ರಕಟಗೊಳ್ಳಲಿದ್ದು, ಆಕ್ಷೇಪಣೆ ಸಲ್ಲಿಸಲು ಜು.೧೦ರವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಘದ ಬೈಲಾ ನಿಯಮದನ್ವಯ ಅರ್ಹರಿರುವ ಸಂಘದ ಸದಸ್ಯರ ಹೆಸರುಗಳನ್ನೊಳಗೊಂಡ ಕರಡು ಮತದಾರರ ಪಟ್ಟಿಯನ್ನು ನಿಗಧಿತ ದಿನಾಂಕದೊಳಗೆ ಸಿದ್ದಪಡಿಸಿ ಹೊರಡಿಸಲಾದ ಮತದಾರರ ಪಟ್ಟಿಯನ್ನು ರಾಜ್ಯಸಂಘಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಮತ್ತು ಕರಡು ಮತದಾರರ ಪಟ್ಟಿ ಹೊರಡಿಸಿದ ನಂತರ ಸಂಗದ ಸದಸ್ಯರಿಂದ ಮನವಿ,ಆಕ್ಷೇಪಣೆಗಳಿಗೆ ಮುಕ್ತ ಅವಕಾಶ ನೀಡುವುದು ಹಾಗೂ ಈ ಕುರಿತು ವ್ಯಾಪಕ ಪ್ರಚಾರ ನಡೆಸಲು ಸೂಚಿಸಲಾಗಿದೆ.
ಯಾವುದೇ ಕಾರಣಕ್ಕೂ ನಿಗಧಿತ ಅವಧಿ ವಿಸ್ತರಣೆಗೆ ಅವಕಾಶವಿಲ್ಲ, ತಪ್ಪಿದಲ್ಲಿ ಸಂಬಂಧಿಸಿದ ಶಾಖೆಗಳೇ ಹೊಣೆಯಾಗತಕ್ಕದ್ದು ಹಾಗೂ ಈ ಸಂಬಂಧ ತಮ್ಮ ಶಾಖೆಗಳಲ್ಲಿ ಕಾರ್ಯಕಾರಿ ಸಮಿತಿ ಸಭೆಗಳನ್ನು ಸಂಘದ ಬೈಲಾ ರೀತ್ಯಾ ನಡೆಸಿ ಕ್ರಮವಹಿಸಲು ಅವರು ಸೂಚಿಸಿದ್ದಾರೆ.