ರಸ್ತೆ ಕಾಮಗಾರಿಗೆ ಶಾಸಕ ಯತ್ನಾಳ ಭೂಮಿಪೂಜೆ, ಅಹವಾಲು ಸ್ವೀಕಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.26: ನಗರದ ದರಬಾರ ಹೈಸ್ಕೂಲ್ ಹತ್ತಿರ ಈಚೆಗೆ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭೂಮಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರೂ.70 ಲಕ್ಷ ಅನುದಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮುಖ್ಯ ರಸ್ತೆಯಿಂದ ದರಬಾರ ಹೈಸ್ಕೂಲ್ ಮೂಲಕ ಭವಾನಿ ಆಸ್ಪತ್ರೆ ವರೆಗೆ ಸಿಸಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಭೂಮಿ ಪೂಜೆಯ ಬಳಿಕ ಸಮಸ್ಯೆಗಳ ಪರಿಹಾರಕ್ಕಾಗಿ ಆಗಮಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಪರಿಹರಿಸುವ ಭರವಸೆ ನೀಡಿದ ಶಾಸಕರು, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ಜವಾಹಾರ ಗೋಸಾವಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.