ಮಹಿಳಾ ಸಬಲೀಕರಣಕ್ಕೆ ಜಾಗೃತಿ ಅಗತ್ಯ: ಶಿಫಾ ಜಮಾದಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.26 :ಸ್ತ್ರೀವಾದದ ವಿಷಯಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಸಾಧ್ಯವಾದಷ್ಟು ಮಹಿಳೆಯರನ್ನು ಎಲ್ಲಾ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಲಾಡಲಿ ಫೌಂಡೇಶನ್ ಟ್ರಸ್ಟ್ ರಾಯಭಾರಿ ಶಿಫಾ ಜಮಾದಾರ ಹೇಳಿದರು.
ನವದೆಹಲಿ ಲಾಡಲಿ ಪೌಂಢೇಶನ್ ಟ್ರಸ್ಟ್, ಜಿಲ್ಲಾಡಳಿತ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶ, ಮಹಿಳಾ ಅಧ್ಯಯನ ವಿಭಾಗ ಇವರ ಆಶ್ರಯದಲ್ಲಿ ಲಾಡಲಿ ಫೌಂಡೇಶನ ಟ್ರಸ್ಟ್ ಇವರಿಂದ ನಗರದ ಮಹಿಳಾ ವಿಶ್ವವಿದ್ಯಾಲಯದ ಬಸ್ ತಂಗುದಾಣದಲ್ಲಿ ಎ.ಐ. ತಂತ್ರಜ್ಞಾನದ ಹೈಟೆಕ್ ಶೌಚಾಲಯದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮಹಿಳೆಯರ ಸಬಲೀಕರಣ ಎಂದರೆ ಗುಣಮಟ್ಟದ ಶಿಕ್ಷಣ, ಆರೋಗ್ಯ, ರಕ್ಷಣೆ, ಮತ್ತು ಆರ್ಥಿಕ ಅವಕಾಶಗಳ ಪ್ರವೇಶವನ್ನು ಪ್ರೋತ್ಸಾಹಿಸುವುದು ಜೊತೆಗೆ ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮಥ್ರ್ಯವನ್ನು ಅರಿತು ಉಜ್ವಲ ಭವಿಷ್ಯಕ್ಕಾಗಿ ದಾರಿಮಾಡಿಕೊಂಡು ಶಿಕ್ಷಣ, ನೈರ್ಮಲ್ಯ ಮತ್ತು ಸುರಕ್ಷತೆ ಮತ್ತು ಹೆಣ್ಣು ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸಬೇಕಾಗಿದೆ ಎಂದರು.
ಅನೇಕ ಕಡೆ ಶೌಚಾಲಯಗಳು ಇಲ್ಲದೆ ಮೂತ್ರವನ್ನು ದೀರ್ಘಕಾಲ ತಡೆಹಿಡಿಯುವುದರಿಂದ ಅನೇಕ ಸೋಂಕುಗಳಿಗೆ ಕಾರಣವಾಗುತ್ತಿದೆ. ಮೂತ್ರಪಿಂಡ, ಗರ್ಭಕಂಠದ ಕ್ಯಾನ್ಸರದಂತಹ ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ಮನಗಂಡು ಲಾಡಲಿ ಫೌಂಡೇಶನ್ ಟ್ರಸ್ಟ್ ಮಹಿಳಾ ವಿಶ್ವವಿದ್ಯಾಲಯದಲ್ಲಿ ಎ.ಐ. ತಂತ್ರಜ್ಞಾನದೊಂದಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಒಂದು ಶೌಚಾಲಯ ನಿರ್ಮಾಣ ಮಾಡುತ್ತಿದ್ದೇವೆ. ವಿಜಯಪುರ ಜಿಲ್ಲೆಯ 9 ಶಾಲೆಗಳಲ್ಲಿಯೂ ಮೊದಲನೆಯ ಹಂತದ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. ಇದಕ್ಕೆ 3 ಕೋಟಿ ವೆಚ್ಚ ಮಾಡುತ್ತಿದ್ದೇವೆ ಎಂದು ಮಹಿಳಾ ಸಬಲೀಕರಣಕ್ಕೆ ಇದು ನಾಂದಿಯಾಗುತ್ತಿದೆ. ಜೊತೆಗೆ ಜಿಲ್ಲೆಯ 100 ಶಾಲೆಯಲ್ಲಿ ನೈರ್ಮಲ್ಯ ಮತ್ತು ಸ್ವಚ್ಚತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಡಾ. ಶಾಂತಾದೇವಿ ಪ್ರೊ. ಲಕ್ಷ್ಮೀದೇವಿ, ಡಾ. ಅಶ್ವಿನಿ, ಪ್ರೊ. ವಿಷ್ಣು ಶಿಂಧೆ, ಲಾಡಲಿ ಫೌಂಡೇಶನದ ರಾಷ್ಟ್ರೀಯ ಸಲಹೆಗಾರ ಡಾ. ಜಾವಿದ ಜಮಾದಾರ, ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೊಂಗ್ರೆ, ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿ ಪ್ರಕಾಶ ರಾಠೋಡ, ಲಾಡಲಿ ಫೌಂಡೇಶನ್Àದ ಕಾರ್ಯಕ್ರಮ ಅಧಿಕಾರಿಗಳಾದ ಅಬಿದ ಪಠಾಣ, ಸರಿತಾ ಚಕ್ರಸಾಲಿ, ಪ್ರೀತಿ ಪತ್ತಾರ ಮುಂತಾದವರು ಉಪಸ್ಥಿತರಿದ್ದರು.