ತಾಳ್ಮೆ ಬಾಳಿನ ದೊಡ್ಡ ಸಂಪತ್ತು: ಹಾರಕೂಡ ಶ್ರೀ
ಬೀದರ್:ಜೂ.25: ತಾಳ್ಮೆ ಬಾಳಿನ ದೊಡ್ಡ ಸಂಪತ್ತು, ಸಹನೆ ತಾಳ್ಮೆ ಏಕಾಗ್ರತೆಯಿಂದ ಮಾಡಿದ ಭಕ್ತಿ ಶಿವಾರ್ಪಣೆಯಾಗಿ ಶಾಶ್ವತ ಫಲ ಶ್ರುತಿ ದೊರಕುವಲ್ಲಿ ಸಾಧ್ಯವಾಗುತ್ತದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶ್ರೀಗಳ ಪೂರ್ವಾಶ್ರಮದ ಬಂಧುಗಳಿಂದ ಏರ್ಪಡಿಸಿದ ಗುರುವಂದನೆ ಹಾಗೂ 666ನೇ ತುಲಾಭಾರ ಸಮಾರಂಭದ ಸಾನಿಧ್ಯ ವಹಿಸಿ, ಮಾತನಾಡಿದ ಶ್ರೀಗಳು ಕಗ್ಗದ ನುಡಿಯಂತೆ ಬೆಳಗ್ಗೆ ಬೀಜ ಸುರಿದು ಸಂಜೆ ಪೈರು ನಿರೀಕ್ಷಿಸುವುದು ಎಷ್ಟು ಅಸಂಬದ್ಧವೊ ಹಾಗೆ ಸಾಂದರ್ಭಿಕ ಹಾಗೂ ತೋರಿಕೆ ಭಕ್ತಿಯಿಂದ ಶಿವನೊಲುಮೆ ದಕ್ಕದು.
ನಮ್ಮ ದೈನಂದಿನ ನಡೆತೆಯೇ ಭಕ್ತಿಯಾಗಿ ಮಾರ್ಪಡಬೇಕು.
ಪ್ರತಿದಿನ ಪ್ರತಿ ಹಂತದಲ್ಲೂ, ಪ್ರತಿ ಕ್ಷೇತ್ರದಲ್ಲೂ ನಾವು ಗೈಯ್ಯುವ ಕೆಲಸ ಕಾರ್ಯಗಳಲ್ಲಿ, ಸಾತ್ವಿಕತೆಯ ಭಕ್ತಿಯ ತರಂಗಗಳು ಕಂಪಿಸುತ್ತಿರಬೇಕು.
ಇಡೀ ನಮ್ಮ ಜೀವನ ಶೈಲಿಯೇ ಭಕ್ತಿಮಯವಾದಗ ದೇವರ ಅನುಗ್ರಹದ ಸುರಕ್ಷಾವಲಯ ನಿರ್ಮಾಣಗೊಂಡು ಅದು ನಮ್ಮನ್ನು ಬದುಕಿನುದ್ದಕ್ಕೂ ಕಾಪಾಡುತ್ತಿರುತ್ತದೆ.
ಅರುವಿನಿಂದ ಗುರುವಿನೊಂದಿಗೆ ಭಕ್ತಿಯ ಬೆಸುಗೆಯಾದೊಡೆ ಕೇಡು ತಾ ಹೆದರಿತು ನೋಡಾ ಎನ್ನುವ ಅನುಭವದ ಮಾತು ಉಲ್ಲೇಖನೀಯ.
ಭಕ್ತಿಯ ಮಹಿಮೆ ಅನನ್ಯ, ಹಾಗಾಗಿ ತಾಳ್ಮೆಯ ತೊಟ್ಟಿಲ ಕಟ್ಟಿ, ಭಕ್ತಿಯ ಜೋಗುಳ ಪಾಡಿದರೆ ಹಾರಕೂಡ ಚನ್ನಬಸವನ ಶುಭ ನಗೆ ಸರ್ವರ ಬಾಳಲ್ಲಿ ಬೆಳದಿಂಗಳಾಗಿ ಸೌಖ್ಯದ ಹೊನ್ನ ಕಿರಣ ಮೂಡಿಸಲಿ ಎಂದು ಶುಭ ಹಾರೈಸಿದರು.
ನಾಗವೇಣಿ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೇಮಲತಾ ಮಲ್ಲಿನಾಥ ಹಿರೇಮಠ ಹಾರಕೂಡ, ಲಲಿತಾ ಗುಂಡಯ್ಯ ಸ್ವಾಮಿ, ಚೆನ್ನಮ್ಮ ಗುರುಸಿದ್ದಯ್ಯ ಮಠಪತಿ, ಜಗದೇವಿ ಶರಣಯ್ಯ ಚುಂಗಿ, ಶರಣಮ್ಮ ಸಿದ್ದಯ್ಯ ಸ್ವಾಮಿ, ಲಕ್ಷ್ಮಿ ರೇವಣಸಿದ್ದಯ್ಯ ಮಠಪತಿ, ನಿರ್ಮಲ ದಯಾನಂದ ಹಿರೇಮಠ, ಮಹಾದೇವಿ ಸಿದ್ದಯ್ಯ ಮಠ, ರಾಚಮ್ಮ ನಾಗಯ್ಯ ಮಠಪತಿ, ರೇಣುಕಾ ದಿಲೀಪಕುಮಾರ ಸ್ವಾಮಿ, ಸುವರ್ಣ ಶಿವಕುಮಾರ ಘಾಳೆ, ಕವಿತಾ ಶಂಕ್ರಯ್ಯ ಚೌಕಿಮಠ, ಸವಿತಾ ಬಸಯ್ಯ ಮಠಪತಿ, ಮಹಾಂತಮ್ಮ ರಾಜಕುಮಾರ ಘಾಳೆ, ನಾಗಮ್ಮ ಶಿವಶರಣಯ್ಯ ಮಠಪತಿ ಉಪಸ್ಥಿತರಿದ್ದರು.
ದಯಾನಂದ ಹಿರೇಮಠ ಸ್ವಾಗತಿಸಿದರು.
ರಾಜಶ್ರೀ ದಿಲೀಪಕುಮಾರ ಸ್ವಾಮಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಕಾರ್ತಿಕ ಸ್ವಾಮಿ ಯಲದಗುಂಡಿ ಸಂಗೀತ ಸೇವೆ ಸಲ್ಲಿಸಿದರು.
ಅಂಬಾರಾಯ ಉಗಾಜಿ ಕಾರ್ಯಕ್ರಮವನ್ನು ನಿರೂಪಿಸಿದರು.
ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ ಅವರ ಪೂರ್ವಾಶ್ರಮದ ಬಂಧುಗಳಿಂದ 666ನೇ ತುಲಾಭಾರ ಜರುಗಿತು.
ಚಿತ್ರ : ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಜರುಗಿದ ಗುರುವಂದನಾ ಹಾಗೂ 666ನೇ ತುಲಾಭಾರ ಸಮಾರಂಭವನ್ನು ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಶಿವಶರಣಯ್ಯ ಮಠಪತಿ, ರಾಜಕುಮಾರ ಘಾಳೆ, ಗುಂಡಯ್ಯ ಸ್ವಾಮಿ ಆಲೂರ, ದಯಾನಂದ ಹಿರೇಮಠ, ಶಂಕ್ರಯ್ಯ ಚೌಕಿಮಠ, ನಾಗವೇಣಿ ಮಠಪತಿ ಮುಂತಾದವರು ಉಪಸ್ಥಿತರಿದ್ದರು.