ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಮನವಿ
ವಿಜಯಪುರ, ಜೂ.25:ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ವಿವಿ ಕುಲ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಬಹುತೇಕ ವಿಶ್ವ ವಿದ್ಯಾನಿಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ವಾರಕ್ಕೆ 16 ಗಂಟೆ ತರಗತಿಗೆ ಪ್ರತಿ ತಿಂಗಳು 35,000,40,000, 45000 ಹಾಗೂ 50,000 ವೇತನ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಕರ್ನಾಟಕ ಸರಕಾರವು ಸರಕಾರಿ ಪದವಿ ಮಹಾ ವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೂ ವಾರಕ್ಕೆ 16 ಗಂಟೆ ತರಬೇತಿಗೆ ತಿಂಗಳಿಗೆ 36,000 ವೇತನ ನೀಡಲಾಗುತ್ತದೆ. ಆದರೆ ಕರ್ನಾಟಕದ ಏಕೈಕ ಮಹಿಳಾ ವಿಶ್ವ ವಿದ್ಯಾನಿಲಯದಲ್ಲಿ ವಾರಕ್ಕೆ 20 ಗಂಟೆ ತರಗತಿ ಮತ್ತು 26000 ವೇತನವನ್ನು ಪ್ರತಿ ತಿಂಗಳಿಗೆ ನೀಡಲಾಗುತ್ತದೆ. ಕಡಮೆ ವೇತನದಲ್ಲಿ ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗುತ್ತದೆ ಎಂದು ಅತಿಥಿ ಉಪನ್ಯಾಸಕರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸಾಕಷ್ಟು ಸಲ ಮನವಿ ಸಲ್ಲಿಸಿದ್ದರೂ ವೇತನ ಹೆಚ್ಚಿಸಿಲ್ಲ. ಅತಿಥಿ ಉಪನ್ಯಾಸಕರ ತೊಂದರೆ ಗಣನೆಗೆ ತಗೆದುಕೊಂಡು ಕೂಡಲೇ ವೇತನ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.
ಡಾ.ಎಂ.ಎಸ್. ಮುಜಾವರ, ಡಾ. ಚಂದ್ರಕಲಾ ಹಳ್ಳಿ, ಗುರುರಾಜ ಬೊಮ್ಮನಹಳ್ಳಿ, ಡಾ. ಸತೀಶ, ಎಸ್.ಆರ್. ಪಾಟೀಲ ಮತ್ತಿತರರು ಇದ್ದರು.