ಪ್ರತಿ ತಿಂಗಳು ಮೂರು ಜಿಲ್ಲೆಗಳಲ್ಲಿ ವಕ್ಪ್ ಅದಾಲತ ನಡೆಸಲಾಗುವುದು: ಸಚಿವ ಬಿ. ಜೆಡ್. ಜಮೀರ್ ಅಹ್ಮದ್ ಖಾನ್
ಬೀದರ. ಜೂ. 25: ವಕ್ಪ್ ಜಮೀನಿನ ಅತಿಕ್ರಮಣ ಮತ್ತು ಖಾತಾ ಸೇರಿದಂತೆ ಇತರೆ ವಿಷಯಗಳ ಕುರಿತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರ ನೀಡಲು ಪ್ರತಿ ತಿಂಗಳು 3 ಜಿಲ್ಲೆಗಳಲ್ಲಿ ವಕ್ಪ್ ಅದಾಲತ್ ನಡೆಸಲಾಗುವುದು ಎಂದು ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ. ಜೆಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ಅವರು ಸೋಮವಾರ ಬೀದರ ನಗರದ ಹೈದರಾಬಾದ್ ರಸ್ತೆಯಲ್ಲಿರುವ ಪಟೇಲ್ ಫಂಕ್ಷನ್ ಹಾಲನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಔಕಾಫ್ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ವಕ್ಪ್ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೊದಲ ಸಲ ವಕ್ಪ್ ಅದಾಲತ್ ಕಾರ್ಯಕ್ರಮ ಬೀದರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಖಾತಾ, ಸ್ಮಶಾನ ಭೂಮಿ ಸೇರಿದಂತೆ ಇತರೆ ವಕ್ಪ್ ಜಮೀನಿಗೆ ಸಂಬಂಧಿಸಿದ ಒಟ್ಟು 178 ಅಹವಾಲುಗಳು ಜನರಿಂದ ಬಂದಿದ್ದು ಈ ಕುರಿತು ಚರ್ಚಿಸಿ ಅವುಗಳಿಗೆ ಪರಿಹಾರ ನೀಡಲು ಅಧಿಕಾರಿಗಳ ಸಭೆ ನಡೆಸುತ್ತೇನೆ. ಮುಸ್ಲಿಂ ಸಮುದಾಯದ ಜನರು ಹೆಚ್ವಿರುವ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಇಲ್ಲದಿದ್ದರೆ ಅಲ್ಲಿ ಸರಕಾರಿ ಜಾಗವಿದ್ದಲಿ ಅದನ್ನು ಸ್ಮಶಾನ ಭೂಮಿಗೆ ಜಾಗ ನೀಡಲು ಅವಕಾಶವಿದೆ ಎಂದು ಹೇಳಿದರು.
ಕಲಬುರಗಿ, ಮಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಕಡೆ ಹಜ್ ಭವನಗಳನ್ನು ನಿರ್ಮಿಸಲಾಗುವುದು. ತಮ್ಮ ಸಮಸ್ಯೆಗಳನ್ನು ಕೇಳಲು ನಾವು ಇಲ್ಲಿಗೆ ಬಂದಿದ್ದೇವೆ. ವಕ್ಪ್ ಆಸ್ತಿ ಯಾರದು ಅಲ್ಲ ಅದು ಭಗವಂತನದಾಗಿದೆ ಅದನ್ನು ಯಾರೇ ಅತಿಕ್ರಮಣ ಮಾಡಿದರು ಬಿಡುವದಿಲ್ಲ. ಇಂದಿನ ತಮ್ಮ ಎಲ್ಲಾ ಅರ್ಜಿಗಳನ್ನು ಪ್ರಥಮ ಆಧ್ಯತೆಯಾಗಿ ಪರಿಗಣಿಸುವುದರ ಜೊತೆಗೆ ತಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್ ಅವರು ಮಾತನಾಡಿ, ಬೀದರ ಜಿಲ್ಲೆಗೆ 3 ದಿನ ಸಮಯ ನೀಡಿ ನಮ್ಮ ಜಿಲ್ಲೆಯ ವಕ್ಪ್ ಭೂಮಿಯ ಸಮಸ್ಯೆಗಳನ್ನು ಆಲಿಸುತ್ತಿರುವುದಕ್ಕೆ ಜಿಲ್ಲೆಯ ಎಲ್ಲಾ ಜನರ ಪರವಾಗಿ ತಮಗೆ ಅಭಿನಂದನೆಗಳು. ಬೀದರ ಜಿಲ್ಲೆಗೆ ಜಮೀರ್ ಅಹ್ಮದ್ ಖಾನ್ ಬರುತ್ತಾರೆ ಎಂದಾಗಲೆ ಬಾಕಿ ಇರುವ ವಕ್ಪ್ ಜಮೀನಿನ ಅರ್ಧ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರ ನೀಡಿದ್ದಾರೆ ಮತ್ತು ಇತರೆ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ ಅವರು ಮಾತನಾಡಿ, ಸ್ಮಶಾನ ಭೂಮಿ ಹಾಗೂ ಮಸೀದಿಗಳ ಸಮಸ್ಯೆಗಳನ್ನು ತೆಗೆದುಕೊಂಡು ತಾವು ಹಲವಾರು ಕಡೆಯಿಂದ ಬಂದಿದ್ದಿರಿ ಮತ್ತು ವಕ್ಪ್ ಆಸ್ತಿ ಬಹಳಷ್ಟು ಕಡೆ ಅತಿಕ್ರಮವಾಗಿದೆ, ತಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವುದು ನಮ್ಮ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ವಕ್ಪ್ ಬೋರ್ಡ್ ರಾಜ್ಯಾದ್ಯಕ್ಷರಾದ ಅನ್ವರ ಭಾಷಾ ಅವರು ಮಾತನಾಡಿ, ತಾವು ಬೆಂಗಳೂರಿಗೆ ಬಂದು ಅಲಿಯುವಂತಾಗಬಾರದು ಎನ್ನುವ ಕಾರಣಕ್ಕಾಗಿ ತಮ್ಮ ಸಮಸ್ಯೆಗಳನ್ನು ಆಲಿಸಲು ನಾವು ಇಲ್ಲಿಗೆ ಬಂದಿದ್ದೆವೆ. ನಮ್ಮ ಮನವಿಯನ್ನು ಸ್ವೀಕರಿಸಿ ಬಂದ ಸಚಿವರಿಗೆ ನಾನು ವಕ್ಪ್ ಬೋರ್ಡ್ ವತಿಯಿಂದ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ತಮ್ಮ ಸಮಸ್ಯೆಗಳ ಕುರಿತು ಸಚಿವರು ನಾವು ಅಧಿಕಾರಿಗಳೊಂದಿಗೆ ಚರ್ಚಿಸಿ ತಮ್ಮ ಶೇ. 50 ರಿಂದ 60 ಪ್ರತಿಶತ ಸಮಸ್ಯೆಗಳಿಗನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಜನರು ಸ್ಮಶಾನ ಭೂಮಿ ಸಮಸ್ಯೆ, ವಕ್ಪ್ ಭೂಮಿ ಅತಿಕ್ರಮಣ, ಕಮೀಟಿ ಸಮಸ್ಯೆಗಳ ಹೆಚ್ಚಿನ ಅರ್ಜಿಗಳನ್ನು ಸಚಿವರ ಗಮನಕ್ಕೆ ತಂದರು ಇದರಲ್ಲಿ ಕಮೀಟಿ ಸಮಸ್ಯೆಗಳನ್ನು ತರಬೇಡಿ ಅದಕ್ಕೆ ಪ್ರತ್ಯೇಕವಾಗಿ ಚರ್ಚಿಸಲಾಗುವುದು. ಈಗ ಕೇವಲ ವಕ್ಪ್ ಭೂಮಿ ಕಬಳಿಕೆ ಸಮಸ್ಯೆ ಮತ್ತು ಮುಟೇಶನ್ ಹಾಗೂ ಸ್ಮಶಾನ ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ಗಮನಕ್ಕೆ ಇರಬೇಕೆಂದು ಜನರಲ್ಲಿ ಮನವಿ ಮಾಡಿದರು. ಸಚಿವರು ಎಲ್ಲರ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವ ಮೂಲಕ ಎಲ್ಲರ ಸಮಸ್ಯೆಗಳಿಗೆ ಪರಿಹಾರ ನೀಡುವ ಕುರಿತು ಭರವಸೆಗಳನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಬೀದರ ನಗರಸಭೆ ಅಧಕ್ಷರಾದ ಮೋಹ್ಮದ್ ಗೌಸ್, ಬೀದರ ಜಿಲ್ಲಾ ವಕ್ಪ್ ಬೋರ್ಡ್ ಅಧ್ಯಕ್ಷರಾದ ಮಹ್ಮದ್ ಫಿರೋಜ್ ಖಾನ, ಕಾಂಗ್ರೆಸ್ ಮುಖಂಡರಾದ ಅಯಾಜ ಖಾನ, ಮನ್ನಾನ ಸೇಠ ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ವಕ್ಪ್ ಬೋರ್ಡ್, ಬೀದರ ನಗರಸಭೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು