250 ಕಿ.ವ್ಯಾಟ್ಸ್ ಟಿ.ಸಿ. ಅಳವಡಿಸಲು ಮನವಿ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.25: ತಾಲೂಕಿನ ತೆಕ್ಕಲಕೋಟೆಯ 3ನೇವಾರ್ಡ್ನ ನಿವಾಸಿಗಳು ತಮ್ಮ ವಾರ್ಡ್ಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗಲು 250ಕಿ.ವ್ಯಾಟ್ಡ್ ಟಿ.ಸಿ. ಅಳವಡಿಸಬೇಕೆಂದು ಒತ್ತಾಯಿಸಿ ಜೆ.ಇ. ಯಲ್ಲಪ್ಪ ಅವರಿಗೆ ಮನವಿ ಸಲ್ಲಿಸಿದರು.
3ನೇವಾರ್ಡ್ನ ಸದಸ್ಯ ನಸರುದ್ದೀನ್ ಮಾತನಾಡಿ 3ನೇ ವಾರ್ಡ್ನಲ್ಲಿ ಸದ್ಯ ಅಳವಡಿಸಿರುವ 100 ಕಿ.ವ್ಯಾಟ್ಸ್ ಟಿ.ಸಿಯು ಪದೇ ಪದೇ ರಿಪೇರಿಗೆ ಬರುತ್ತಿದ್ದು, ಕಳೆದ ಒಂದು ತಿಂಗಳಿಂದ ತೀವ್ರವಾದ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ, ನಮ್ಮ ವಾರ್ಡ್ನಲ್ಲಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಜೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ.
ಸದ್ಯ 100 ಕಿ.ವ್ಯಾಟ್ಸ್ ಟಿ.ಸಿಯನ್ನು ಅಳವಡಿಸಿದ್ದು, ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಸಂಪರ್ಕವನ್ನು ಅಳವಡಿಸಿರುವುದರಿಂದ ಲೋಡ್ ಹೆಚ್ಚಾಗಿ ಟಿ.ಸಿ. ಕೆಟ್ಟು ಹೋಗುತ್ತಿದೆ, ಇದರಿಂದಾಗಿ ವಾರ್ಡ್ನ ಜನರಿಗೆ ಸಮಸ್ಯೆಯಾಗುತ್ತಿದೆ, ಆದ್ದರಿಂದ 250 ಕಿ.ವ್ಯಾಟ್ಸ್ನ ಟಿ.ಸಿ.ಯನ್ನು ಅಳವಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಜೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಹೇಳಿದರು.
ಯೂನುಸ್, ನಾಗರಾಜ, ಸುಬಾನ್, ಆಜಂ, ಮಾಬಾಷ, ರಜಾಕ್, ಚಂದ್‌ಬಾಷ ಇನ್ನಿತರರು ಇದ್ದರು.