ಸೌಲಭ್ಯ ಒದಗಿಸಲು ಆಗ್ರಹ
ಚನ್ನಮ್ಮನ ಕಿತ್ತೂರು, ಜೂ 25: ಸಮೀಪದ ಖಾನಾಪೂರ ನಂದಗಡ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗೌಳಿ ಜನಾಂಗ ವಾಸಿಸುತ್ತಿರುವ ಗೌಳಿವಾಡ ಎಂಬ ಗ್ರಾಮ ಕಳೆದ 40 ವರ್ಷಗಳಿಂದ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಸಮಾಜ ಸೇವಕ ಜ್ಯೋತಿಬಾ ಬೆಂಡಿಗೇರಿ ಹೇಳಿದರು.
ನಂದಗಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗ್ರಾಮದಲ್ಲಿ ಸುಮಾರು 20 ಕುಟುಂಬಗಳು ವಾಸಿಸುತ್ತಿದ್ದು, ಸಣ್ಣಮಕ್ಕಳನ್ನು ಹಿಡಿದು 150 ಜನಸಂಖ್ಯೆ ಹೊಂದಿದ್ದು 25 ಶಾಲಾ ಮಕ್ಕಳಿದ್ದಾರೆ. ಈ ಗ್ರಾಮಕ್ಕೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಗ್ರಾಮದಿಂದ ಸುಮಾರು 3 ಕಿಮೀ. ದೂರ ನಡೆದುಕೊಂಡು ಹೋಗಬೇಕು. ಸರಿಯಾದ ರಸ್ತೆ, ನೀರು, ವಿದ್ಯುತ್ ಸಂಪರ್ಕವಿಲ್ಲ. ಅಂಗನವಾಡಿ ಶಾಲೆಗಳಿಲ್ಲ. ಮಳೆಗಾಲದಲ್ಲಿ ಹೇಳತೀರದ ಗೋಳು.
ಅಂಗನವಾಡಿ ಮಕ್ಕಳಿಂದ ಶಾಲಾ-ಕಾಲೇಜಿಗೆ 3 ಕಿ.ಮೀ. ನಡೆದುಕೊಂಡೆ ಹೋಗಬೇಕು. ಕಾಡಿನಲ್ಲಿ ಪ್ರಾಣಿಗಳ ಭಯ. ಸರ್ಕಾರ ಕಾಟಾಚಾರಕ್ಕೆ 2017 ರಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯವರು ಇವರನ್ನು ಗುರುತಿಸಿ ಮನೆ-ಮನೆಗೆ ಸೋಲಾರ್ ವಿದ್ಯುತ್ ಅಳವಡಿಸಿದ್ದರು. ಈಗ ಅದು ಹಾಳಾಗಿದ್ದು ಕತ್ತಲಲ್ಲಿ ಕೂಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ತಾಲೂಕಿನ ಹಲವಾರು ಗ್ರಾಮಗಳು ಇದೇ ಪರಿಸ್ಥಿತಿಯಲ್ಲಿವೆ. ಬಡತನ ಮುಕ್ತ ರಾಜ್ಯ ನಿರ್ಮಾಣ ಮಾಡಲು ಹೊರಟ ಸರ್ಕಾರಕ್ಕೆ ಇದು ಕಾಣುತ್ತಿದೆಯೇ? ಎನ್ನುವದು ಪ್ರಶ್ನೆಯಾಗಿದೆ. ಚುನಾವಣೆ ಬಂದಾಗ ಮಾತ್ರ ಭರವಸೆ. ನಂತರ ಕಡೆಗಣಿಸುತ್ತಾರೆ. ಆದ್ದರಿಂದ ಜನಪ್ರತಿನಿಧಿಗಳು ಈ ಕಡೆ ಗಮನಹರಿಸಿ ಸೂಕ್ತ ಸೌಕರ್ಯ ಒದಗಿಸಲು ಮುಂದಾಗಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.