ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಬಾದಾಮಿ, ಜೂ 25: ರಾಜ್ಯದ ಜನತೆಗೆ ಮೇಲಿಂದ ಮೇಲೆ ಬೆಲೆ ಏರಿಕೆ ಬರೆ ಕೊಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ಮಾಡಿದರು.
ಪ್ರತಿಭಟನಾ ನಿರತ ಕಾರ್ಯಕರ್ತರು ನಗರದ ಶಿವಯೋಗಮಂದಿರ ಶಾಖಾ ಮಠದಿಂದ ನಗರದ ಪ್ರಮುಖ ರಸ್ತೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯಿಂದ ದಿನಸಿ ವಸ್ತುಗಳು, ಗೃಹ ಬಳಕೆ ವಸ್ತುಗಳು, ತರಕಾರಿ, ಅಟೋ, ಸಾರಿಗೆ ಸೇರಿದಂತೆ ನಿತ್ಯ ಜೀವನದ ಎಲ್ಲ ಅಗತ್ಯ ವಸ್ತಗಳ ಬೆಲೆ ಏರಿಕೆಯಿಂದ ಕಷ್ಟವಾಗಿದೆ ಎಂದರು.
ತಾಲೂಕ ಬಿಜೆಪಿ ಅಧ್ಯಕ್ಷ ನಾಗರಾಜ ಕಾಚೆಟ್ಟಿ ಮಾತನಾಡಿ ಅಧಿಕಾರಕ್ಕೆ ಬಂದು ಒಂದೇ ವರ್ಷದಲ್ಲಿ ಹತ್ತು ಹಲವಾರು ಕ್ಷೇತ್ರಗಳಾದ ಮುದ್ರಾಂಕ ನೊಂದಣಿ, ಸ್ಥರಾಸ್ಥಿಗಳ ಮಾರ್ಗಸೂಚಿ ದರ, ಮೋಟಾರು ವಾಹನಗಳ ನೊಂದಣಿ ಶುಲ್ಕ, ವಾಣಿಜ್ಯ, ವಿದ್ಯುತ್ ದರ, ಹಾಲಿನ ಬೆಲೆ, ಮದ್ಯದ ಮೇಲಿನ ತೆರಿಗೆ ಹೆಚ್ಚಿಸಿದೆ. ಬರಗಾಲದಿಂದ ತತ್ತರಿಸಿರುವ ರೈತರಿಗೆ ಬಿತ್ತನೆ ಬೀಜದ ದರ ಏರಿಕೆ ಮಾಡಿದೆ ಎಂದರು.
ಕಾಡಾ ಮಾಜಿ ಅಧ್ಯಕ್ಷ ಬಿ.ಪಿ.ಹಳ್ಳೂರ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶೇಖರಗೌಡ ಪಾಟೀಲ, ನಾಗರಾಜ ಕಡಗದ, ಭಾಗ್ಯ ಉದ್ನೂರ, ಪ್ರಕಾಶ ರಾಠೋಡ, ಹೊನ್ನಯ್ಯ ಹಿರೇಮಠ, ಬಸವರಾಜ ಭೂತಾಳಿ, ಶರಣಪ್ಪ ಹೂಗಾರ, ಭೀಮನಗೌಡ ಪಾಟೀಲ, ಬಸವರಾಜ ಪಾತ್ರೋಟಿ, ಬೇಲೂರಪ್ಪ ವಡ್ಡರ, ಮಹಾಂತೇಶ ತಳವಾರ, ಶಂಕ್ರಪ್ಪ ಅವರಾದಿ, ಸಂಜು ಜಗದಾಳೆ, ಶಹಾಜಿ ಪವಾರ, ಸಾತನ್ನವರ, ಹುಚ್ಚಪ್ಪ ಬೆಳ್ಳಿಗುಂಡಿ, ವಸಂತ ದೊಡ್ಡಪತ್ತಾರ, ಸೇರಿದಂತೆ ಕಾರ್ಯಕರ್ತರು ಇದ್ದರು.