ಮೋದಿಯವರ ಅಘೋಷಿತ ತುರ್ತುಪರಿಸ್ಥಿತಿ ಅಪಾಯಕಾರಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೨೫; ಇಂದಿರಾಗಾಂಧಿ ಯವರು ತುರ್ತುಪರಿಸ್ಥಿತಿಯನ್ನು ಅಧಿಕೃತವಾಗಿ 25 ನೇ ಜೂನ್ 1975 ಕ್ಕೆ ತಂದು 21ನೇ ಮಾರ್ಚ್ 1977 ಕ್ಕೆ  ಮುಕ್ತಾಯ ಗೊಳಿಸಿದರು. ಇಂದಿರಾಗಾಂಧಿ ಯವರು ಜಾರಿಗೆ ತಂದ ತುರ್ತುಪರಿಸ್ಥಿತಿ ಅವರ ರಾಜಕೀಯ ವಿರೋಧಿಗಳಿಗೆ ಸ್ವಲ್ಪ ತೊಂದರೆಯಾಯಿತು. ಆದರೆ ದೇಶದ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆ ಯಾಗಿಲ್ಲವೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೇಶದ ಬಡಜನರಿಗೆ ತುರ್ತುಪರಿಸ್ಥಿತಿ ಸುವರ್ಣಕಾಲವಾಗಿತ್ತು. ಬಡಜನರು ಸಾಲ  ಮಾಡಿ ತಮ್ಮ  ಆಸ್ತಿ ಪಾಸ್ತಿ,ಪಾತ್ರೆ ಪಗಡಗಳನ್ನು ಲೇವದೇವಿಗಾರರಿಗೆ ಸಾಲಕ್ಕಾಗಿ ಅಡವಿಟ್ಟಿದ್ದರು. ತುರ್ತು ಪರಿಸ್ಥಿತಿ ಜಾರಿಯಾದ ಕಾರಣ ತಮ್ಮ ಆಸ್ತಿ ಪಾಸ್ತಿ ಪಾತ್ರೆ ಪಗಡ ಇತರೆ ವಸ್ತುಗಳನ್ನು ಪುಕ್ಕಟೆಯಾಗಿ ವಾಪಾಸ್ ಪಡೆದರು. 20 ಅಂಶಗಳ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೆ ಬಂತು. ದೇಶದ ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆಯಾಯಿತು. ದೇಶದ ರಫ್ತು ಜಾಸ್ತಿಯಾಯಿತು. ವಿದೇಶಿ ಹೂಡಿಕೆಯಲ್ಲಿ ಹೆಚ್ಚಳ ಕಂಡು ಬಂತು. ದೇಶದ ಹಿಂದೂ ಮುಸ್ಲಿಂರು ಕೋಮು ಸೌಹಾರ್ದತೆಗೆ ಒತ್ತು ನೀಡಿದರು.ಇಂದಿರಾಗಾಂಧಿ ಯವರು ತುರ್ತುಪರಿಸ್ಥಿತಿ ಘೋಷಿಸಿದ ಕಾರಣಕ್ಕೆ ಚುನಾವಣೆಯಲ್ಲಿ ಆಧಿಕಾರವನ್ನು ಕಳೆದು ಕೊಂಡು ಬೆಲೆ ತೆತ್ತರು. ಆದರೆ 2014 ಕ್ಕೆ ದೇಶದ ಪ್ರಧಾನಮಂತ್ರಿಯಾಗಿ ಬಂದ ನರೇಂದ್ರ ಮೋದಿಯವರ ಕಾಲದಲ್ಲಿ ದೇಶದಲ್ಲಿ ಆಘೋಷಿತ ತುರ್ತು ಪರಿಸ್ಥಿತಿ ಇದೆ. ಕಳೆದ ಹತ್ತು ವರ್ಷ ಗಳಿಂದ ಅದು ಜಾಸ್ತಿ ಯಾಗುತ್ತಾ ಬಂದಿದೆ. ಇಂದಿರಾಗಾಂಧಿಯವರ ಘೋಷಿತ ತುರ್ತು ಪರಿಸ್ಥಿತಿಗಿಂತ ಮೋದಿಯವರ ಆಘೋಷಿತ ತುರ್ತು ಪರಿಸ್ಥಿತಿ ಅತ್ಯಂತ ಅಪಾಯಕಾರಿ ಎಂದು ಡಿ. ಬಸವರಾಜ್ ಎಚ್ಚರಿಸಿದ್ದಾರೆ.