ಜ್ಞಾನವೇ ಜೀವನದ ಯಶಸ್ಸಿನ ಮಾರ್ಗ : ಎಲ್.ಹೆಚ್. ಅರುಣಕುಮಾರ್
ಸಂಜೆವಾಣಿ ವಾರ್ತೆ
ದಾವಣಗೆರೆ, ಜೂ.24- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ದಾವಣಗೆರೆ ಜಿಲ್ಲಾ ಘಟಕ ಮತ್ತು ಬಿ.ಇ.ಎ.ಹೈಯರ್ ಪ್ರೈಮರಿ ಸ್ಕೂಲ್, ಸಿಬಿಎಸ್‌ಸಿ ಸ್ಕೂಲ್‌ನ ವತಿಯಿಂದ ಲಿಂ. ಶ್ರೀಮತಿ ಇಂದುಮತಿ ಎಂ. ಪಾಟೀಲ ದತ್ತಿ ಕಾರ್ಯಕ್ರಮ ಮತ್ತು ಶರಣ ಚಿಂತನಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್. ಅರುಣ್‌ಕುಮಾರ್ ಅವರು, ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ” ಕುರಿತು ಅನುಭಾವದ ನುಡಿಗಳನ್ನಾಡುತ್ತಾ, ಜ್ಞಾನಕ್ಕಿಂತ ಮಿಗಿಲಾದದ್ದು ಮತ್ತು ಪವಿತ್ರವಾದದ್ದು ಯಾವುದೂ ಇಲ್ಲ. ಜ್ಞಾನ ಎಂದರೆ ತಿಳುವಳಿಕೆ, ವಿಷಯಗಳ ಗ್ರಹಣ ಮತ್ತು ಪ್ರಾಜ್ಞತೆ, ಅಜ್ಞಾನ ಎಂದರೆ ಜ್ಞಾನದ ಕೊರತೆ. ಜೀವನದಲ್ಲಿ ಜ್ಞಾನವನ್ನು ಸಂಪಾದಿಸದೇ ಇರುವವನು ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಜ್ಞಾನವೇ ಜೀವನದ ಯಶಸ್ಸಿನ ಮಾರ್ಗವಾಗಿದೆ. ಜ್ಞಾನವಿಲ್ಲದ ಮಾನವ ಜೀವನ ಅಪೂರ್ಣ ಎಂದು ತಿಳಿಸಿದರು.ಜ್ಞಾನವು ನಮ್ಮಲ್ಲಿನ ಹಣ ಆಸ್ತಿಗಿಂತಲೂ ಮುಖ್ಯವಾದ ಸಂಪತ್ತಾಗಿದೆ, ಅದು ಎಂದಿಗೂ ಖಾಲಿಯಾಗದ ಭಂಡಾರ ಜ್ಞಾನವನ್ನು ಸಂಪಾದಿಸುವಾಗ ಆದಷ್ಟು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು. ಜ್ಞಾನದ ಕೊರತೆಯಿಂದಾಗಿ ವ್ಯಕ್ತಿಯು ಜೀವನದಲ್ಲಿ ಮೋಸ ಹೋಗುವ ಹಾಗೂ ನಷ್ಟವನ್ನು ಅನುಭವಿಸುವ ಸಾಧ್ಯತೆಯಿರುತ್ತದೆ. ಬುದ್ಧಿವಂತ ವ್ಯಕ್ತಿಯು ಸರಿಯಾದ ಮಾರ್ಗದಲ್ಲಿ ಬಳಸಿಕೊಂಡರೆ ಅದು ಜೀವನಕ್ಕೆ ಸಹಕಾರಿಯಾಗುತ್ತದೆಂದು ತಿಳಿಸಿದರು. ವಿದ್ಯಾರ್ಥಿಗಳು ಸುಜ್ಞಾನವನ್ನು ಬೆಳೆಸಿಕೊಳ್ಳುವುದರ ಮೂಲಕ ಎಲ್ಲಾ ಮೌಢ್ಯ ಮತ್ತು ಅಂಧಕಾರಗಳನ್ನು ತೊಡೆದು ಹಾಕಿ ಸಮಾಜದ ಉತ್ತಮ ಆಸ್ತಿಗಳಾಗಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತಮಂಡಳಿಯ ಪ್ರಾಚಾರ್ಯರಾದ ನೀತುಜಿ ನೆರವೇರಿಸಿ ಮಾತನಾಡುತ್ತ ವಿದ್ಯಾರ್ಥಿಗಳು ಶರಣರ ವಚನಗಳ ಮೌಲ್ಯವನ್ನು ಅನುಸರಿಸಿ ಉತ್ತಮ ಪ್ರಜೆಗಳಾಗಬೇಕೆಂದು ತಿಳಿಸಿದರು.