ಜನರ ಸಮಸ್ಯೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಲಿ
ಹುಬ್ಬಳ್ಳಿ,ಜೂ.25:ಜನರು ಸಮಸ್ಯೆಗಳ ಬಗ್ಗೆ ಸರ್ಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಿದರೆ, ಸಕಾರಾತ್ಮಕವಾಗಿ ಅಧಿಕಾರಿಗಳು ತಕ್ಷಣವೇ ಸ್ಪಂದನೆ ನೀಡಬೇಕು. ಜನರ ಸಮಸ್ಯೆಗಳ ಇತ್ಯರ್ಥಕ್ಕೆ ವಿಳಂಬ ಮಾಡದೇ ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಜಿ.ಆರ್.ಜೆ. ಹೇಳಿದರು.
ಇಂದು ಕುಂದಗೋಳದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥ ಪಡಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಯಾವುದೇ ಅರ್ಜಿಗೆ ನಿಗದಿತ ಕಾಲಮಿತಿ ಇರುವುದಿಲ್ಲ. ಹೀಗಾಗಿ ಅಧಿಕಾರಿಗಳು ಜನರು ಸಲ್ಲಿಸಿದ ಅರ್ಜಿಗಳಿಗೆ ಅಲ್ಪ ಕಾಲದಲ್ಲೇ ಪರಿಹಾರ ಒದಗಿಸಬೇಕು. ಅಲ್ಲದೇ ಅಧಿಕಾರಿಗಳು ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದನ್ನು ಜನರು ಆನ್‍ಲೈನ್ ಮೂಲಕ ಪರಿಶೀಲಿಸಬಹುದು. ಜನರು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಅಲ್ಲದೇ ಮಧ್ಯವರ್ತಿಗಳ ಹಾವಳಿಗೆ ಜನರು ಸಿಲುಕುವುದಿಲ್ಲ. ಜಿಲ್ಲಾಡಳಿತ ಜನರ ಮನೆ ಬಾಗಿಲಿಗೆ ಹೋಗಿ ಜನರ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದರು.
ಜುಲೈ 15 ರೊಳಗೆ ಜನರ ಸಮಸ್ಯೆಗಳನ್ನು ಅಧಿಕಾರಿಗಳು ಇತ್ಯರ್ಥ ಪಡಿಸಬೇಕು. ಅರ್ಜಿಗಳನ್ನು ಗಣಕೀಕರಣ ಮಾಡಿಕೊಂಡು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ತಪ್ಪದೇ ಅರ್ಜಿಗಳಿಗೆ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು. ಜನರ ಸಮಸ್ಯೆಗಳನ್ನು ಯಾವುದೇ ಅಡೆತಡೆ ಇಲ್ಲದೆ ಇತ್ಯರ್ಥ ಪಡಿಸಬೇಕು. ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಉತ್ತಮ ಆಡಳಿತವನ್ನು ಜನರಿಗೆ ನೀಡಲು ಮುಂದಾಗಬೇಕು. ಚುರುಕಾಗಿ ಕಾರ್ಯನಿರ್ವಹಿಸುವಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಸವಾಯಿ ಗಂಧರ್ವ ಭವನದ ಆವರಣದಲ್ಲಿ ಸಸಿ ನೆಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ.ಟಿ.ಕೆ., ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಉಪವಿಭಾಧಿಕಾರಿಗಳಾದ ಶಾಲಂ ಹುಸೇನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕುಂದಗೋಳ ತಹಶೀಲ್ದಾರರಾದ ಅಶೋಕ ಶಿಗ್ಗಾಂವಿ ಸ್ವಾಗತಿಸಿದರು.
ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ತಂದರು. ಬೆಳೆ ಹಾನಿ ಪರಿಹಾರ, ಪಿಂಚಣಿ, ರಸ್ತೆಗಳು, ವಿದ್ಯುತ್ ಸಮಸ್ಯೆ, ಕುಡಿಯುವ ನೀರು ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತ ಸುಮಾರು 100 ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು. ಅಲ್ಲದೇ ಜನರಿಗೆ ಅವಶ್ಯಕ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ನಿಂದ ಜನರು, ಜಾನುವಾರುಗಳಿಗೆ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರಮ ವಹಿಸಬೇಕು. ಹೆಸ್ಕಾಂ ಅಧಿಕಾರಿಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ತಹಶೀಲ್ದಾರರು ಮೇಲ್ವಿಚಾರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ಜಿಲ್ಲೆಯ ರೈತರಿಗೆ ಬೆಳೆಹಾನಿ ಪರಿಹಾರ ಒದಗಿಸಲಾಗಿದೆ. ಅಲ್ಲದೇ ಪರಿಹಾರ ಹಣ ಇನ್ನೂ ಬಿಡುಗಡೆಯಾಗಬೇಕಿದೆ. ಪರಿಹಾರ ಹಣ ಬಿಡುಗಡೆಯಾದ ಬಳಿಕ ಉಳಿದ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ರೈತರಿಗೆ ತಿಳಿಸಿದರು.
ಕುಂದಗೋಳ -ಮುಳ್ಳೊಳ್ಳಿ ರಸ್ತೆಯು ಮಳೆ ನೀರು ಹಾಗೂ ಒಳಚರಂಡಿ ನೀರಿನಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ರಸ್ತೆಯನ್ನು ಆದಷ್ಟು ಬೇಗ ಸರಿಪಡಿಸಿ ಕೊಡುವಂತೆ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಹೊಲಗಳಿಗೆ ತೆರಳಲು ಸರಿಯಾದ ರಸ್ತೆ ನಿರ್ಮಿಸಿ ಕೊಡಬೇಕು ಎಂದು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಕೂಡಲೇ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.